ಬೆಂಗಳೂರು:ರಾಜ್ಯಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣಿಸುತ್ತಿರುವ ಸಂದರ್ಭದಲ್ಲಿಯೂ ರಾಜ್ಯದ ನ್ಯಾಯಾಲಯಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಜೂನ್ ತಿಂಗಳಲ್ಲಿ 24 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥಪಡಿಸಿವೆ.
ಕೊರೊನಾ ಸಂಕಷ್ಟದಲ್ಲೂ ಕೋರ್ಟ್ಗಳ ನ್ಯಾಯದಾನ: ಜೂನ್ನಲ್ಲಿ 24 ಸಾವಿರ ಅರ್ಜಿ ಇತ್ಯರ್ಥ - ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್
ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಜೂನ್ 1 ರಿಂದ 30 ರವರೆಗೆ ಒಟ್ಟು 24781 ಪ್ರಕರಣಗಳನ್ನು ಇತ್ಯರ್ಥಪಡಿಸಿವೆ.
ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಮಾಹಿತಿ ನೀಡಿದ್ದು, ಅದರಂತೆ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಜೂನ್ 1 ರಿಂದ 30 ರವರೆಗೆ ಒಟ್ಟು 24781 ಪ್ರಕರಣಗಳನ್ನು ಇತ್ಯರ್ಥಪಡಿಸಿವೆ. ಕೊರೊನಾ ಭೀತಿಯ ನಡುವೆಯೂ ಹೈಕೋರ್ಟ್ ರೂಪಿಸಿರುವ ಎಸ್.ಓ.ಪಿ ಮಾರ್ಗಸೂಚಿಗಳ ಅಡಿ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ.
ಜೂನ್ ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಒಟ್ಟು 57,903 ಪ್ರಕರಣಗಳು ದಾಖಲಾಗಿವೆ. ಫಿಸಿಕಲ್ ಫೈಲಿಂಗ್ ಮೂಲಕ 52,172 ಪ್ರಕರಣಗಳು ದಾಖಲಾಗಿದ್ದರೆ, ಇ-ಫೈಲಿಂಗ್ ಮೂಲಕ 5731 ಪ್ರಕರಣಗಳು ದಾಖಲಾಗಿವೆ. ಇನ್ನು ರಾಜ್ಯಾದ್ಯಂತ ವಕೀಲರು ಮತ್ತು ಕಕ್ಷೀದಾರರ ಕೋರಿಕೆ ಮೇರೆಗೆ 405284 ಪ್ರಕರಣಗಳನ್ನು ನ್ಯಾಯಾಲಯಗಳ ಎದುರು ವಿಚಾರಣೆಗೆ ನಿಗದಿಪಡಿಸಲಾಗಿದೆ. ಇವುಗಳಲ್ಲಿ 14653 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹಾಗೆಯೇ 10,128 ಮಧ್ಯಂತರ ಅರ್ಜಿಗಳನ್ನೂ ಇತ್ಯರ್ಥಪಡಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ತಿಳಿಸಿದ್ದಾರೆ.