ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಆರು ಮಂದಿ ಸದಸ್ಯರು, ಕಾಂಗ್ರೆಸ್‌ನ ಒಬ್ಬರು ಹಾಗೂ ಬಿಜೆಪಿಯ ಒಬ್ಬರು ಸದಸ್ಯರು ಇಂದು ಬೆಳಗ್ಗೆ ಸ್ಪೀಕರ್ ಕೊಠಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದಲ್ಲಿರುವ ಸ್ಪೀಕರ್ ಕೊಠಡಿಯಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರ ಸಮ್ಮುಖದಲ್ಲಿ ಜೆಡಿಎಸ್ನ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಬಿ.ಎನ್.ರವಿಕುಮಾರ್, ಎಚ್.ಟಿ.ಮಂಜು, ಸಿ.ಬಿ.ಸುರೇಶ್ ಬಾಬು, ಸ್ವರೂಪ್ ಪ್ರಕಾಶ್, ಕಾಂಗ್ರೆಸ್ ಸದಸ್ಯ ಎ.ಬಿ.ರಮೇಶ್ ಬಂಡಿಸಿದ್ದನಗೌಡ ಮತ್ತು ಬಿಜೆಪಿ ಸದಸ್ಯ ಪ್ರಭು ಚವ್ಹಾಣ್ ಪ್ರಮಾಣ ವಚನ ಸ್ವೀಕರಿಸಿದರು.
ನಂತರ ಸದನ ಸಮಾವೇಶಗೊಂಡಾಗ ಆರ್.ವಿ.ದೇಶಪಾಂಡೆ ಮಾತನಾಡಿ, ಇಲ್ಲಿಯವರೆಗೆ ಒಟ್ಟು 223 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಸದಸ್ಯ ಎಚ್.ಸಿ.ಬಾಲಕೃಷ್ಣ ಅವರು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸದನಕ್ಕೆ ತಿಳಿಸಿದರು.
2ನೇ ದಿನ 27 ಶಾಸಕರು ಪ್ರಮಾಣವಚನ ಸ್ವೀಕಾರ:ನಿನ್ನೆ ಸದನದಲ್ಲಿ ಒಟ್ಟು 27 ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಸಂವಿಧಾನ, ದೇವರು, ಭಗವಂತ ಸತ್ಯನಿಷ್ಠೆ ಹಾಗೂ ಕ್ಷೇತ್ರದ ಜನತೆ ಹೆಸರಿನಲ್ಲಿ ವಿಧಾನಸಭೆಯ ನೂತನ ಸದಸ್ಯರಾಗಿ ಪ್ರಮಾಣವಚನ ಪಡೆದರು. ಹದಿನಾರನೇ ವಿಧಾನಸಭೆಯ ಅಧಿವೇಶನದ 2ನೇ ದಿನದಂದು ಆರ್.ವಿ ದೇಶಪಾಂಡೆ ಅವರು ನೂತನ ಸದಸ್ಯರ ಪ್ರಮಾಣವಚನಕ್ಕೆ ಅವಕಾಶ ಕಲ್ಪಿಸಿದರು.
ವಿವಿಧ ಪಕ್ಷಗಳ 27 ಮಂದಿ ಶಾಸಕರು ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಮೊದಲಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಪ್ರಭು ಶ್ರೀರಾಮಚಂದ್ರ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯನಿಷ್ಠೆ ಹೆಸರಿನಲ್ಲಿ ಪ್ರತಿಜ್ಙೆ ಮಾಡಿ ಪ್ರಮಾಣವಚನ ಸ್ವೀಕರಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್ ಜಗಜ್ಯೋತಿ ಬಸವಣ್ಣರ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯನಿಷ್ಠೆ ಹೆಸರಿನಲ್ಲಿ ಪ್ರತಿಜ್ಙೆ ಸ್ವೀಕರಿಸಿದರು.