ಬೆಂಗಳೂರು: ಗಲಭೆ ಪ್ರಕರಣ ಸಂಬಂಧ ಸದ್ಯ ತನಿಖೆ ಚುರುಕುಗೊಂಡಿದ್ದು, ಇಲ್ಲಿಯವರೆಗೆ ಒಟ್ಟು 22 ಎಫ್ಐಆರ್ ದಾಖಲಾಗಿದೆ. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ತಲಾ 11 ಎಫ್ಐಆರ್ಗಳು ದಾಖಲಾಗಿವೆ.
ಮತ್ತೊಂದೆಡೆ ಡಿಜೆ ಹಳ್ಳಿ ಠಾಣೆ ಬಳಿ ಗಲಭೆಯಾದ ಹಿನ್ನೆಲೆ ಠಾಣೆಯ ಸಂಪೂರ್ಣ ಸೌಂದರ್ಯ ಹಾಳಾಗಿತ್ತು. ಹೀಗಾಗಿ ನಿನ್ನೆ ಎಫ್ಎಸ್ಎಲ್ ತಂಡ ಬಂದು ಪರಿಶೀಲನೆ ನಡೆಸಿದ ಕಾರಣ ಸದ್ಯ ಬಿಬಿಎಂಪಿ ನೌಕರರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
22 ಎಫ್ಐಆರ್ ದಾಖಲು, ಬಿಬಿಎಂಪಿಯಿಂದ ಸ್ವಚ್ಛತಾ ಕಾರ್ಯಾರಂಭ ಠಾಣೆ ಸುತ್ತಲೂ ಕಲ್ಲು ಮತ್ತು ಬಾಟಲ್ಗಳಿಂದ ದಾಳಿ ಮಾಡಲಾಗಿತ್ತು. ಹೀಗಾಗಿ ವಾತಾವರಣ ಸಂಪೂರ್ಣ ಹಾಳಾಗಿತ್ತು. ಹಾಗೆಯೇ ಸಾವಿರಾರು ಮಂದಿ ದಾಳಿ ಮಾಡಿದ್ದರಿಂದ ಠಾಣೆಯ ಆಸ್ತಿ-ಪಾಸ್ತಿ ನಷ್ಟವಾಗಿ, ಬೆಂಕಿ ಕೆನ್ನಾಲಿಗೆಗೆ ಹಲವು ವಸ್ತುಗಳು ಸುಟ್ಟು ಕರಕಲಾಗಿದ್ದವು.
ಠಾಣೆ ಬಳಿ ದಾಳಿ ಮಾಡಲು ಬಂದಿದ್ದ ದುಷ್ಕರ್ಮಿಗಳ ಚಪ್ಪಲಿ, ಶೂಗಳು ಸ್ಥಳದಲ್ಲಿ ಬಿದ್ದಿವೆ. ಹೀಗಾಗಿ ಎಲ್ಲವನ್ನು ತೆರವುಗೊಳಿಸಲು 50ಕ್ಕೂ ಹೆಚ್ಚು ಬಿಬಿಎಂಪಿ ಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ನಡಿಯುತ್ತಿದೆ. ಮತ್ತೊಂದೆಡೆ ಠಾಣೆಯ ಮುಂಭಾಗ ಬಹುತೇಕ ಮನೆ, ಅಂಗಡಿಗಳಿವೆ. ಹೀಗಾಗಿ ಮನೆಗಳ ಮುಂದೆ ನಿಲ್ಲಿಸಿದ್ದ ಸಾರ್ವಜನಿಕರ ವಾಹನಗಳು ಸಂಪೂರ್ಣವಾಗಿ ಭಸ್ಮವಾಗಿವೆ.
ವಾಹನ ಮಾಲೀಕರ ಅಳಲು!
ಬ್ಯಾಂಕ್ನಿಂದ ಸಾಲ ಪಡೆದು ವಾಹನ ಖರೀದಿಸಿದ್ದೇವೆ. ಕಣ್ಣೆದುರಲ್ಲೇ ಎಲ್ಲಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸದ್ಯ ಘಟನೆ ಸಂಬಂಧ ಡಿಜೆ ಹಳ್ಳಿ ಠಾಣೆಗೆ ತೆರಳಿ ದೂರು ನೀಡ್ತೇವೆ. ತುಂಬಾ ಕಷ್ಟ ಪಟ್ಟು ಗಾಡಿ ತಗೊಂಡಿದ್ವಿ. ಸಾಲ ಮರುಪಾವತಿಸೋದು ಹೇಗೆ?. ನಮಗೆ ನ್ಯಾಯ ದೊರಕಿಸಿ ಕೊಡಬೇಕು. ನಾವು ಏನೂ ತಪ್ಪು ಮಾಡಿಲ್ಲ. ಘಟನೆ ವೇಳೆ ಲೈಟ್ ಆಫ್ ಮಾಡಿ ಮನೆಯೊಳಗೇ ಇದ್ವಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.