ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸಿಸಿಬಿ ಪೊಲೀಸರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಡ್ರಗ್ಸ್ ದಂಧೆ ಜಾಲವನ್ನು ಬೇಧಿಸಿದ್ದಾರೆ.
ಪೊಲೀಸರಿಂದ 204 ಕೆಜಿ ಗಾಂಜಾ ವಶ ಸಮೀರ್ ಬಿನ್, ಕೈಸರ್ ಪಾಷಾ, ಇಸ್ಮಾಯಿಲ್ ಎಂಬುವವರನ್ನು ಬಂಧಿಸಿ ಸುಮಾರು 1 ಕೋಟಿ ರೂ. ಮೌಲ್ಯದ 204 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸುತ್ತಿದ್ದ 3 ಮೊಬೈಲ್ ಫೋನ್, ಲಾರಿ, ಕಾರು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಓರ್ವ ವ್ಯಕ್ತಿ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆರೋಪಿ ಸಮೀರ್ ಆಂಧ್ರ ಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ತುನಿ ಎಂಬ ಗ್ರಾಮದಿಂದ ಕಂಟೈನರ್ ಲಾರಿಯಲ್ಲಿ ಗಾಂಜಾ ಸಾಗಿಸುತ್ತಿದ್ದನಂತೆ.
ಈತನ ಸಹಕಾರದಿಂದ ಕೈಸರ್ ಪಾಷಾ ಮತ್ತು ಇಸ್ಮಾಯಿಲ್ ಶರೀಫ್ ಕರ್ನಾಟಕದ ಬೆಂಗಳೂರು, ಮೈಸೂರು, ರಾಮನಗರ, ಚಿಕ್ಕಮಗಳೂರು, ಚಿಕ್ಕಾಬಳ್ಳಾಪುರ ಸೇರಿದಂತೆ ಇನ್ನಿತರೆ ಜಿಲ್ಲೆಗಳಿಗೆ ಹಂಚುತ್ತಿದ್ದರು ಎನ್ನಲಾಗಿದೆ. ಈ ಮಾಹಿತಿ ನಗರ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದ್ದು, ಸದ್ಯ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾತನಾಡಿ, ಆರೋಪಿಗಳು ನೆಟ್ವರ್ಕ್ ಮುಖಾಂತರ ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು, ಪೆಡ್ಲರ್ಸ್ಗಳಿಗೆ ಮಾರಾಟ ಮಾಡುತ್ತಿದ್ದರು. ಹಾಗೆಯೇ ಕಳೆದ ವಾರ ನಡೆದ ಡಿ.ಜೆ.ಹಳ್ಳಿ ,ಕೆ.ಜಿ.ಹಳ್ಳಿ ಗಲಭೆಯಲ್ಲಿ ಡ್ರಗ್ಸ್ ಬಳಕೆಯಾಗಿದೆ ಎಂದಿದ್ದಾರೆ.