ಬೆಂಗಳೂರು:ರಾಜ್ಯ ಸರ್ಕಾರ ಇಂದು ವಿಧಾನಸಭೆಯಲ್ಲಿ ಸಿಡಿ ಗದ್ದಲದ ಮಧ್ಯೆ 2020-21ನೇ ಸಾಲಿಗೆ 12,038 ಕೋಟಿ ರೂ.ಗಳ ಪೂರಕ ಅಂದಾಜುಗಳಿಗೆ ಮಂಜೂರಾತಿ ಪಡೆಯಲು ಸದನದಲ್ಲಿ ಪ್ರಸ್ತಾವನೆ ಮಂಡಿಸಿದೆ.
ಸಿಎಂ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ ಸಚಿವ ಬಸವರಾಜ ಬೊಮ್ಮಾಯಿ ಪ್ರಸ್ತಾವನೆ ಸಲ್ಲಿಸಿದರು. 2020-21ನೇ ಸಾಲಿನ ಪೂರಕ ಅಂದಾಜುಗಳ 3ನೇ ಹಾಗೂ ಅಂತಿಮ ಕಂತಿನ ಬೇಡಿಕೆಗಳ ಪ್ರಸ್ತಾವನೆಯನ್ನು ಮಂಡಿಸಲಾಯಿತು. ಹಣಕಾಸು ವರ್ಷದ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಮಾ. 31ರೊಳಗಾಗಿ ಸಂದಾಯ ಮಾಡಬೇಕಿರುವ ವೆಚ್ಚಗಳಿಗಾಗಿ ಇಲಾಖಾವಾರು ಪೂರಕ ಅಂದಾಜು ಹಾಗೂ ಅಂತಿಮ ಕಂತಿನ ಬೇಡಿಕೆ ಪ್ರಸ್ತಾವಗಳನ್ನು ಮಂಡಿಸಿದರು.
ಮಾ. 31ರ ಅಂತ್ಯದೊಳಗಾಗಿ 'ಕೃಷಿ ಮತ್ತು ತೋಟಗಾರಿಕೆ'ಗೆ ಸಂಬಂಧಿಸಿದ ವೆಚ್ಚಗಳ ಸಂದಾಯಕ್ಕಾಗಿ 960 ಕೋಟಿ ರೂ., ಕಂದಾಯ ಇಲಾಖೆಗೆ ವೆಚ್ಚಗಳ ಪಾವತಿಗಾಗಿ 1376.74 ಕೋಟಿ ರೂ., ಇಂಧನ ಇಲಾಖೆಗೆ 2000 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 636 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 1732 ಕೋಟಿ ರೂ., ಜಲಸಂಪನ್ಮೂಲ ಇಲಾಖೆ 1460 ಕೋಟಿ ರೂ., ಆರೋಗ್ಯ ಇಲಾಖೆಗೆ 474 ಕೋಟಿ ರೂ., ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ 112 ಕೋಟಿ ರೂ. ಮೊತ್ತದ ಪೂರಕ ಅಂದಾಜು ಪಡೆಯಲು ಬೇಡಿಕೆ ಸಲ್ಲಿಸಿದರು.
ಪಶುಸಂಗೋಪನೆ ಮೀನುಗಾರಿಕೆ ವೆಚ್ಚಗಳಿಗೆ 87.45 ಕೋಟಿ ರೂ., ಆರ್ಥಿಕ ಇಲಾಖೆ ಸಂಬಂಧಿಸಿದ ವೆಚ್ಚಗಳಿಗೆ 184.42 ಕೋಟಿ ರೂ., ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ 29.85 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ ಇಲಾಖೆ ವೆಚ್ಚಗಳಿಗಾಗಿ 854.80 ಕೋಟಿ ರೂ., ಮೂಲಭೂತ ಸೌಕರ್ಯ ಅಭಿವೃದ್ಧಿ 20 ಕೋಟಿ ರೂ., ವಸತಿ 89.24 ಕೋಟಿ ರೂ., ಶಿಕ್ಷಣ 127.96 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆ 712.52 ಕೋಟಿ ರೂ., ಅರಣ್ಯ ಇಲಾಖೆ 43.36 ಕೋಟಿ ರೂ., ಪ್ರವಾಸೋದ್ಯಮ ಮತ್ತು ಯುವಜನ ಸೇವೆ ಇಲಾಖೆ 40.50 ಕೋಟಿ ರೂ., ಸಹಕಾರ ಇಲಾಖೆ 49.8 ಕೋಟಿ ರೂ., ಸಮಾಜ ಕಲ್ಯಾಣ 277.67 ಕೋಟಿ ರೂ., ವಾಣಿಜ್ಯ ಮತ್ತು ಕೈಗಾರಿಕೆ ಸಂಬಂಧಿಸಿದ ವೆಚ್ಚಗಳ 470.61 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 38.60 ಕೋಟಿ ರೂ., ವಾರ್ತಾ, ಮಾಹಿತಿ ಮತ್ತು ತಂತ್ರಜ್ಞಾನ 98 ಕೋಟಿ ರೂ. ಸೇರಿ ಒಟ್ಟು 12,038 ಕೋಟಿ ರೂ.ಗಳ ಪೂರಕ ಅಂದಾಜುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.