ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಎಸ್‌ಡಿಪಿಐ 2023ರ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಎಸ್‌ಡಿಪಿಐ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಜಿ, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು.
ಮೈಸೂರಿನ ಜಿಲ್ಲೆಯ ನರಸಿಂಹರಾಜ ಕ್ಷೇತ್ರದಲ್ಲಿ ಅಬ್ದುಲ್ ಮಜೀದ್, ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರದಲ್ಲಿ ಭಾಸ್ಕರ್ ಪ್ರಸಾದ್, ದ.ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ಅಲ್ಪಾನ್ಸೋ ಫ್ರಾಂಕೋ, ಬೆಳ್ತಂಗಡಿಯಲ್ಲಿ ಅಕ್ಬರ್ ಬೆಳ್ತಂಗಡಿ, ಕಾಪು ಕ್ಷೇತ್ರದಲ್ಲಿ ಹನೀಶ್ ಮಳ್ಳೂರ್, ದಾವಣಗೆರೆಗೆ ಇಸ್ಮಾಯಿಲ್ ಝಬಿವುಲ್ಲಾ, ಚಿತ್ರದುರ್ಗ ಶ್ರೀನಿವಾಸ್ ಬಾಳೆಕಾಯಿ, ವಿಜಯನಗರ ನಸೀರ್ ಖಾನ್ ಮತ್ತು ಸರ್ವಜ್ಞನಗರದಲ್ಲಿ ಅಬ್ದುಲ್ ಹನ್ನಾನ್ ಗೆ ಟಿಕೆಟ್ ನೀಡಲಾಗಿದೆ.
ರಾಜ್ಯದಲ್ಲಿ ಸಂವಿಧಾನಕ್ಕೆ ಬೆಲೆ ಇಲ್ಲದಂತಾಗಿದೆ;ಇದೇ ವೇಳೆ ಮಾತನಾಡಿದ ಎಂ.ಕೆ ಫೈಜಿ, ಎಸ್‌ಡಿಪಿಐ 100 ಕ್ಷೇತ್ರದಲ್ಲಿ ಟಿಕೆಟ್ ನೀಡಲಿದೆ. 43 ಕ್ಷೇತ್ರ ಅಂತಿಮವಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಹಾಳಾಗಿದೆ. ಕಳೆದ ಬಾರಿ ಬಿಜೆಪಿಗೆ ಬಹುಮತ ಸಿಗಲಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸರ್ಕಾರ ಮಾಡಿದ್ರು. ಆದರೆ ಕಾಂಗ್ರೆಸ್ ಪಕ್ಷದ ಶಾಸಕರನ್ನ ಖರೀದಿಸಿ ಸರ್ಕಾರ ರಚನೆ ಮಾಡಿತು. ಬಿಜೆಪಿ ಬಟ್ಟೆ ಖರೀದಿ ಮಾಡಿದಂತೆ ಖರೀದಿಸಿದ್ರು. ಬಿಜೆಪಿಗೆ ಜನರ ಮುಂದೆ ಇಡಲು ಯಾವುದೇ ವಿಚಾರ ಇಲ್ಲ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಮುಂದಿನ ಚುನಾವಣೆಗೂ ಕೂಡ ಗದ್ದಲ ಮಾಡಲು ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿವೃದ್ಧಿ ಬಗ್ಗೆ ಕೇಳಬೇಡಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕು. ಆದರೆ, ಅವರ ಕೈಯಲ್ಲೂ ಕೂಡ ಇದು ಆಗುತ್ತಿಲ್ಲ. ಹೀಗಾಗಿ SDPI ಹೊಸ ಪರ್ಯಾಯ ಪಕ್ಷವಾಗಿದೆ. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ. ಉಳಿದ ಕಡೆ ಅಭ್ಯರ್ಥಿ ಅಂತಿಮ ಮಾಡಲಾಗುತ್ತಿದೆ ಎಂದು ಹೇಳಿದರು.