ಬೆಂಗಳೂರು:2023 ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಸಿನಿಮಾ ತಾರೆಯರು ಕೂಡ ಈ ಬಾರಿ ಪ್ರಚಾರ ಕಣಕ್ಕೆ ಇಳಿದು ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಂಡರು. ಇನ್ನೇನು ವಿಧಾನಸಭೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಅದೇ ರೀತಿ ಕನ್ನಡ ಚಿತ್ರರಂಗದಿಂದ ಸಾಕಷ್ಟು ನಟರು ರಾಜಕಾರಣಕ್ಕೆ ಬಂದು ಜನರ ಪ್ರೀತಿ ವಿಶ್ವಾಸ ಗಳಿಸಿ ಅದರಲ್ಲಿ ಕೆಲ ತಾರೆಯರು ಸಕ್ಸಸ್ ಕಂಡಿದ್ದಾರೆ. ಹಾಗಾದರೆ ಈ ಬಾರಿ ಚುನಾವಣೆಯಲ್ಲಿ ಯಾರೆಲ್ಲ ಕನ್ನಡ ಚಿತ್ರರಂಗದವರು ಜನರ ಪ್ರೀತಿ ಗಳಿಸಿ ಗೆಲ್ಲಲು ಪಣ ತೊಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಂತರ ಸಿನಿಮಾಗೆ ಪಾದಾರ್ಪಣೆ ಮಾಡಿದ ನಟ ಹಾಗು ನಿರ್ಮಾಪಕ ಬಿ ಸಿ ಪಾಟೀಲ್. ನಿಷ್ಕರ್ಷ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಬಿ ಸಿ ಪಾಟೀಲ್, ಇದೇ ಸ್ಟಾರ್ ಡಮ್ ಬಳಸಿ ರಾಜಕೀಯಕ್ಕೆ ಬರ್ತಾರೆಂದು ಯಾರೂ ಊಹಿಸಿರಕ್ಕಿರಲಿಲ್ಲ.
ಜೆಡಿಎಸ್ ಪಕ್ಷದಿಂದ ರಾಜಕೀಯ ಜರ್ನಿ ಶುರು ಮಾಡಿದ ಬಿ ಸಿ ಪಾಟೀಲ್ ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದರು. ಈಗ ಮತ್ತೆ ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವ ಮೂಲಕ ಮತ್ತೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಇನ್ನು ಸ್ಯಾಂಡಲ್ವುಡ್ಗೆ ಸಹ ಕಲಾವಿದನಾಗಿ ಬಂದು, ನಂತರ ನಾಯಕ ನಟನಾದವರಲ್ಲಿ ಸಿ ಪಿ ಯೋಗಿಶ್ವರ್ ಕೂಡ ಒಬ್ಬರು. ಸೈನಿಕ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟನಾದ ಸಿ ಪಿ ಯೋಗಿಶ್ವರ್ ಕೂಡ 1999ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ಜರ್ನಿ ಶುರು ಮಾಡಿದರು. ಸದ್ಯ ಬಿಜೆಪಿ ಪಕ್ಷದಲ್ಲಿ ಸಿ ಪಿ ಯೋಗೀಶ್ವರ್ ಗುರುತಿಸಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿ ಎಂ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೀಶ್ವರ್ ಮತ್ತೆ ಗೆಲ್ಲಲು ಪಣ ತೊಟ್ಟಿದ್ದಾರೆ.
ಶರವೇಗದ ಸರದಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಕುಮಾರ್ ಬಂಗಾರಪ್ಪ. 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟನಾಗಿದ್ದರು. 1996ರಲ್ಲಿ ರಾಜಕೀಯ ಪ್ರವೇಶ ಮಾಡಿದ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಹಿರಿಯ ಪುತ್ರ. ಇದೀಗ ಶಿವಮೊಗ್ಗದ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡುವ ಮೂಲಕ ಜನರ ಪ್ರೀತಿ ಗಳಿಸಿ, ಬಿಜೆಪಿಯಿಂದ ಸೊರಬದಲ್ಲಿ ಈ ಬಾರಿಯ ಎಲೆಕ್ಷನ್ ನಲ್ಲಿ ಕುಮಾರ ಬಂಗಾರಪ್ಪಗೆ ಪ್ರತಿಷ್ಠೆ ಆಗಿದೆ.
2001ರಲ್ಲಿ ಆಂಟಿ ಪ್ರೀತ್ಸೆ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನಾಗಿ ಮುನಿರತ್ನ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದರು. ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದರು.ಸದ್ಯ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿ ಕೆಲಸ ಮಾಡಿ, ಈಗ ಮತ್ತೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.