ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ 15 ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ 66.25ರಷ್ಟು ಮತದಾನ ದಾಖಲಾಗಿದೆ.
ಚಿಕ್ಕಬಳ್ಳಾಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಹುಣಸೂರು, ಕೆ.ಆರ್. ಪೇಟೆ, ಕೆ.ಆರ್. ಪುರಂ, ಹೊಸಕೋಟೆ, ರಾಣೆಬೆನ್ನೂರು, ಕಾಗವಾಡ, ಗೋಕಾಕ್, ಅಥಣಿ, ವಿಜಯನಗರ, ಶಿವಾಜಿನಗರ, ಹಿರೇಕೆರೂರು ಮತ್ತು ಯಲ್ಲಾಪುರ ಕ್ಷೇತ್ರಗಳಿಗೆ ಶಾಂತಿಯುತವಾಗಿ ಮತದಾನ ನಡೆಯಿತು.
ಮುಂಜಾನೆ 7 ಗಂಟೆಗೆ ವೋಟಿಂಗ್ ಶುರುವಾಗುತ್ತಿದ್ದಂತೆ ಹಲವು ಕ್ಷೇತ್ರಗಳಲ್ಲಿ ಮತಪ್ರಭುಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ರೆ ಸಂಜೆ ನಂತರ ಮತಗಟ್ಟೆಗೆ ಆಗಮಿಸಿದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ರಾಜ್ಯಾದ್ಯಂತ ಶೇ.66.25 ರಷ್ಟು ಮತದಾನವಾಗಿದೆ ಎಂದ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ. ಹೊಸಕೋಟೆಯಲ್ಲಿ ಅತಿಹೆಚ್ಚು ಶೇ.86.77 ಮತ್ತು ಕೆ.ಆರ್.ಪುರಂನಲ್ಲಿ ಶೇ.43.25 ಅತಿ ಕಡಿಮೆ ಮತದಾನ ಪ್ರಮಾಣ ದಾಖಲಾಗಿದೆ.
ಹುಣಸೂರಿನಲ್ಲಿ ಗೊಂದಲ:
ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್, ಬಿಜೆಪಿಗರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಇತ್ತ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರ ಸ್ವಗ್ರಾಮ ಹುಣಸೂರು ತಾಲೂಕಿನ ಹೊಸರಾಮನಹಳ್ಳಿಗೆ ಮತ ಹಾಕಲು ಆಗಮಿಸಿದ್ದರು. ಗ್ರಾಮದ ಮತಗಟ್ಟೆಗೆ ಆಗಮಿಸಿ ಹೊರ ಬರುತ್ತಿದ್ದಂತೆ, ಅಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಶಾಸಕರನ್ನು ತಡೆದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಶಾಸಕರು, ಇನ್ಸ್ಪೆಕ್ಟರ್ ಜೊತೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಶಾಸಕರ ಬೆಂಬಲಿಗರು ಇನ್ಸ್ಪೆಕ್ಟರ್ ವಿರುದ್ಧ ಕೋಪತಾಪ ತೋರಿಸಿದ್ರು.