ಬೆಂಗಳೂರು:''ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿಕೆ ಬಹಳ ಆಶ್ಚರ್ಯ ಉಂಟುಮಾಡಿದೆ'' ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಹೊಸದಾಗಿ ಮನೆ ಕಟ್ಟಿದವರು ಹಾಗೂ ಹೊಸ ಬಾಡಿಗೆದಾರರಿಗೆ 58 ಯೂನಿಟ್ ಉಚಿತ ಅಂತ ಹೇಳಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವೆಂದು ಹೇಳಿದ್ದಾರೆ. ನೀವು ಕೊಟ್ಟಿರುವ ಭರವಸೆ ಹಿನ್ನೆಲೆಯಲ್ಲಿ ಜನರು ನಿಮಗೆ ವೋಟ್ ಕೊಟ್ಟಿದ್ದಾರೆ. ಜನರ ನಂಬಿಕೆಗೆ ಮೋಸ ಮಾಡಬೇಡಿ. ಆದರೆ ನಿನ್ನೆ ಕೆ ಜೆ ಜಾರ್ಜ್ 58 ಯೂನಿಟ್ ಉಚಿತ ವಿದ್ಯುತ್ ನೀಡ್ತಾರೆ ಎಂದು ಅವರ ಹೇಳಿಕೆ ಆಶ್ಚರ್ಯ ಉಂಟಾಗುತ್ತದೆ. ಮುಖ್ಯಮಂತ್ರಿಗಳ ಮಾತಿನ ಗೌರವ ಉಳಿಬೇಕಾದರೆ, ನೀವು ಹೇಳಿದಂತೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡಬೇಕು'' ಎಂದು ಆಗ್ರಹಿಸಿದರು.
ಇನ್ನು ವಿದ್ಯುತ್ ದರ ಹೆಚ್ಚಳದಿಂದ ಸಣ್ಣ ಕೈಗಾರಿಕೆಗೆ ಬಹಳ ನಷ್ಟ ಆಗಿದೆ. ಸಣ್ಣ ಕೈಗಾರಿಕೆಗಳನ್ನು ನಿಲ್ಲಿಸುವ ವಾತಾವರಣ ನಿರ್ಮಾಣ ಆಗಿದೆ. ವಿದ್ಯುತ್ ಬೆಲೆ ಹೆಚ್ಚಳ ಕಡಿಮೆ ಮಾಡಬೇಕು. ಅಂದು ನಮ್ಮ ಸರ್ಕಾರದ ಮುಂದೆ ಪ್ರಸ್ತಾಪ ಇದ್ದರೂ ನಮ್ಮ ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ. ವಿದ್ಯುತ್ ಬೆಲೆ ಏರಿಕೆ ಪರಿಷ್ಕರಣೆ ಮಾಡುವ ಕೆಲಸ ನಿಮಗೆ ಇರುತ್ತದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ವಿದ್ಯುತ್ ದರ ಏರಿಕೆ ಕುರಿತು ನಮಗೂ ಗೊಂದಲವಿದೆ- ಸತೀಶ್ ಜಾರಕಿಹೊಳಿ:ಒಂದೇ ದಿನದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರ ರಾಜ್ಯಕ್ಕೆ ಹೋಗಲು ಸಾಧ್ಯವಿಲ್ಲ. ಮಹಾರಾಷ್ಟ್ರಕ್ಕೆ ಹೋಗಬೇಕಾದರೆ, 10 ವರ್ಷ ಸಮಯಬೇಕಾಗುತ್ತದೆ. ತಕ್ಷಣ ಹೋಗೋಕೆ ಅದೇನು ಡಬ್ಬಾ ಅಂಗಡಿ ಹಾಗೂ ಚಹಾ ಅಂಗಡಿನಾ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ವಿದ್ಯುತ್ ದರ ಇಳಿಕೆ ಮಾಡದಿದ್ದರೆ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದಾಗಿ ಬೆಳಗಾವಿ ಕೈಗಾರಿಕೋದ್ಯಮಿಗಳು ನೀಡಿರುವ ಎಚ್ಚರಿಕೆ ಕುರಿತು ಅವರು ಉತ್ತರಿಸಿದರು.