ಬೆಂಗಳೂರು:ರಾಜ್ಯದಲ್ಲಿನ ಬಾಡಿಗೆ ಮನೆಗಳಲ್ಲಿ ವಾಸಿಸುವವರೂ ಸೇರಿದಂತೆ ಎಲ್ಲ ಗೃಹಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಿಂದ ಬಾಡಿಗೆದಾರರು ವಂಚಿತರಾಗಲಿದ್ದಾರೆ ಎಂಬ ಆಪಾದನೆ ಕೇಳಿ ಬಂದ ಹಿನ್ನೆಲೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.
ಬಾಡಿಗೆದಾರರೂ ಸೇರಿದಂತೆ ಗೃಹಬಳಕೆಯ ಎಲ್ಲರಿಗೂ ಗೃಹಜ್ಯೋತಿ ಯೋಜನೆಯ ಲಾಭ ಸಿಗಲಿದೆ. ಸರ್ಕಾರ ಘೋಷಿಸಿದಂತೆ 200 ಯೂನಿಟ್ವರೆಗೆ ಬಾಡಿಗೆದಾರರೂ ಬಿಲ್ ಪಾವತಿ ಮಾಡಬೇಕಿಲ್ಲ. ಸರ್ಕಾರ ಎಲ್ಲ ವರ್ಗದ ಜನರಿಗಾಗಿ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ದೇವರಾಜು ಅರಸು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗಸೂಚಿಯಲ್ಲಿ ಇರುವ ನಿಯಮಗಳು ಬಾಡಿಗೆದಾರರಿಗೂ ಅನ್ವಯವಾಗುತ್ತದೆ. ಅವರೂ ಕೂಡ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದಲ್ಲಿ ಬಿಲ್ ಕಟ್ಟಬೇಕಿಲ್ಲ ಎಂದು ಹೇಳಿದರು.
ಬಿಜೆಪಿ ವಿರುದ್ಧ ಟೀಕೆ:ಉಚಿತ ಘೋಷಣೆಗಳಲ್ಲಿನ ತೊಡಕುಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿನಾಕಾರಣ ಪ್ರತಿಭಟನೆ ಮಾಡುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ನನ್ನ ನೇತೃತ್ವದ ಹಿಂದಿನ ಸರ್ಕಾರದಲ್ಲಿ ನೀಡಿದ 162 ಭರವಸೆಗಳಲ್ಲಿ 158 ಅನ್ನು ಈಡೇರಿಸಿದ್ದೇವೆ. ಅವರಿಗೆ ಬೇರೇನೂ ಮಾಡಲು ಕೆಲಸವಿಲ್ಲದ ಕಾರಣ ಅವರು ಟೀಕೆ ಮಾಡುತ್ತಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಸರ್ಕಾರ ರಚಿಸಿದ ತಕ್ಷಣ 10 ಗಂಟೆ ವಿದ್ಯುತ್ ಉಚಿತ, ರೈತರ ಸಾಲಮನ್ನಾ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ನೀಡುವ ಭರವಸೆ ನೀಡಿದ್ದರು. ಇದ್ಯಾವುದನ್ನೂ ಮಾಡದ ಬಿಜೆಪಿ ಜನವಿರೋಧಿ ಪಕ್ಷವಾಗಿದೆ. ಅವರಿಗೆ ನಮ್ಮನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.