ಬೆಂಗಳೂರು:2013-14 ರಿಂದ 2017-18 ರವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 3 ಕೋಟಿ 26 ಲಕ್ಷ ರೂ ಕಾಫಿ, ತಿಂಡಿ ಮತ್ತು ಊಟ ಇತ್ಯಾದಿ ಆತಿಥ್ಯದ ವೆಚ್ಚಕ್ಕೆ ಖರ್ಚಾಗಿದೆ. ಆದ್ರೆ 200 ಕೋಟಿ ರೂ ಖರ್ಚು ಮಾಡಿದ್ದಾರೆ ಎಂದು ಸುಳ್ಳನ್ನು ಉತ್ಪಾದಿಸಿ ನಾಡಿನ ಜನತೆಗೆ ದ್ರೋಹ ಬಗೆದಿದ್ದಾರೆ. ಇದು ಐಪಿಸಿ ಕಲಂ 420 ಗೆ ಅರ್ಹವಾದ ಪ್ರಕರಣ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಡೀ ಬಿಜೆಪಿಯೇ ಸುಳ್ಳಿನ ಕಾರ್ಖಾನೆ ಎಂಬುದನ್ನು ಪದೇ ಪದೆ ಪ್ರೂವ್ ಮಾಡುತ್ತಿದೆ. ಇಂದೂ ಸಹ ಮರಿ ಸುಳ್ಳಿನ ಮಷಿನ್ ಒಂದು ನಮ್ಮ ಸರ್ಕಾರದ ಅವಧಿಯಲ್ಲಿ ಕಾಫಿ ತಿಂಡಿಗೆಂದು 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂಬುದೊಂದು ಸುಳ್ಳನ್ನು ಉತ್ಪಾದಿಸಿ ಮೀಡಿಯಾಗಳಿಗೆ ಬಿಡುಗಡೆ ಮಾಡಿದೆ. ಈ ಬಿಜೆಪಿಗರು ಕರ್ನಾಟಕದ ಜನರನ್ನೇನು ಮೂರ್ಖರು ಎಂದುಕೊಂಡಿದ್ದಾರಾ? ಇವರಿಗೆ ಆತ್ಮಸಾಕ್ಷಿ ಎಂಬುದೇನಾದರೂ ಇದೆಯಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. 40 ಪರ್ಸೆಂಟ್ ಹಗರಣ, ಮಾಡಾಳ್ ವಿರೂಪಾಕ್ಷಪ್ಪ ಅವರ ಹಗರಣದಿಂದ ಕಂಗಾಲಾಗಿರುವ ಬಿಜೆಪಿಯು ಇಂಥ ಸುಳ್ಳುಗಳನ್ನು ಉತ್ಪಾದಿಸಿಕೊಂಡು ಓಡಾಡುತ್ತಿದೆ ಎಂದು ದೂರಿದರು.
ವಾಸ್ತವ ಏನೆಂದರೆ 2013-14 ರಿಂದ 2017-18 ರವರೆಗೆ ಕಾಫಿ ತಿಂಡಿ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿಯು ಆತಿಥ್ಯಕ್ಕೋಸ್ಕರ ಖರ್ಚು ಮಾಡಿದ ದಾಖಲೆಗಳನ್ನು ಸರ್ಕಾರ ನನಗೆ ನೀಡಿದೆ. 13-5-2013 ರಿಂದ 30-01-2014 ರವರೆಗೆ 85,13 ಲಕ್ಷ ರೂಪಾಯಿಗಳು, 2014-15 ರಲ್ಲಿ 58.45 ಲಕ್ಷ ರೂ, 2015-16 ರಲ್ಲಿ 39.20 ಲಕ್ಷ ರೂ, 2016-17 ರಲ್ಲಿ 66 ಲಕ್ಷ ಮತ್ತು 2017-18 ರಲ್ಲಿ 77.26 ಲಕ್ಷ ರೂ ಖರ್ಚಾಗಿದೆ. ಒಟ್ಟಾರೆ 5 ವರ್ಷಗಳ ನಮ್ಮ ಸಕಾರದ ಅವಧಿಯಲ್ಲಿ 3.26 ಕೋಟಿ ರೂ ಮಾತ್ರ ಮುಖ್ಯಮಂತ್ರಿಗಳ ಕಚೇರಿ ಸಭೆ, ಜನತಾದರ್ಶನಗಳು ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಮುಂತಾದವುಗಳಿಗೆ ಖರ್ಚಾಗಿದೆ ಎಂದು ವಿವರಿಸಿದ್ದಾರೆ.