ಬೆಂಗಳೂರು :ಕೊರೊನಾ ಮಹಾಮಾರಿಗೆ ಈವರೆಗೆ ಬಿಬಿಎಂಪಿಯ ಐವರು ನೌಕರರೇ ಬಲಿಯಾಗಿದ್ದಾರೆ. ನಿನ್ನೆ ಮೂವರು ಮೃತಪಟ್ಟಿದ್ದು, ಇಂದು ಇಬ್ಬರು ಬಲಿಯಾಗಿದ್ದಾರೆ. ಗೋವಿಂದರಾಜನಗರದಲ್ಲಿ ಸಹಾಯಕ ಕಂದಾಯ ಅಧಿಕಾರಿಯಾಗಿದ್ದ ಶೈಲೇಶ್ ಅವರಿಗೆ ಮೂರು ದಿನಗಳ ಹಿಂದೆ ಸೋಂಕಿರುವುದು ದೃಢಪಟ್ಟಿತ್ತು.
ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಇನ್ನೊಂದೆಡೆ ಮಹಾಲಕ್ಷ್ಮಿಪುರದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾಥ್ ಅನಾರೋಗ್ಯದಲ್ಲಿದ್ದರು. ಇಂದು ಆಸ್ಪತ್ರೆಗೆ ದಾಖಲಿಸುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ನಂತರ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಲಿಕೆ ಸಿಬ್ಬಂದಿ, ಅಧಿಕಾರಿಗಳಿಗೆ ಪ್ರತ್ಯೇಕ ಆಸ್ಪತ್ರೆ ಮೀಸಲಿಡುವಂತೆ ಸಂಘಟನೆಯ ಬೇಡಿಕೆಗೆ ಪ್ರತಿಕ್ರಿಯೆ ನೀಡಿರುವ ಆಯುಕ್ತರಾದ ಬಿ ಹೆಚ್ ಅನಿಲ್ ಕುಮಾರ್, ಕೋವಿಡ್ ಕೆಲಸ ಮಾಡುತ್ತಿರುವವರಿಗೆ ಮೊದಲ ಆದ್ಯತೆ ಕೊಡುತ್ತೇವೆ. ಆದರೆ, ಪ್ರತ್ಯೇಕ ಆಸ್ಪತ್ರೆ ಮೀಸಲಿಡೋದಿಲ್ಲ ಎಂದರು.
ಬಿಬಿಎಂಪಿ ನೌಕರರ ಸಂಘದವರನ್ನು ಕರೆಸಿ ಮಾತನಾಡಿದ್ದು, ಅವರು ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದಿದ್ದಾರೆ. ಪ್ರತ್ಯೇಕ ಆಸ್ಪತ್ರೆ ಮಾಡಿದ್ರೆ ತಾರತಮ್ಯ ಮಾಡಿದ ಹಾಗಾಗುತ್ತದೆ. ನಮ್ಮ ಸಿಬ್ಬಂದಿಗೆ ಈವರೆಗೆ ಆಸ್ಪತ್ರೆ, ಬೆಡ್ ಸಮಸ್ಯೆ ಆಗಿಲ್ಲ ಎಂದರು.