ಬೆಂಗಳೂರು:ಬಿಜೆಪಿ ಶಾಸಕರ ರಾಜಕುಮಾರ್ ಪಾಟೀಲ್ ತೆಲ್ಕೂರ್ ವಿರುದ್ಧ ಫೇಸ್ಬುಕ್ನಲ್ಲಿ ಮಹಿಳೆಯೊಬ್ಬರು, ನನಗೆ ಶಾಸಕರಿಂದ ಅನ್ಯಾಯ ಆಗಿದೆ ನ್ಯಾಯ ಕೊಡಿಸಿ ಎಂದು ಆರೋಪಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ ನನ್ನ ಮಗುವಿಗೆ ನ್ಯಾಯ ಬೇಕು ಎಂದು ಮಹಿಳೆ ಕೇಳಿಕೊಂಡಿದ್ದಾರೆ. ಮತ್ತೊಂದೆಡೆ ಸೇಡಂ ಶಾಸಕ ಈ ಕುರಿತು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.
ಸದ್ಯ ದೂರಿನನ್ವಯ ಮಹಿಳೆಯನ್ನ ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ನನ್ನನ್ನು ಅಕ್ರಮವಾಗಿ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಕಾಂಗ್ರೆಸ್ನವರು ಹೇಳಿಸಿ ಈ ರೀತಿ ಆರೋಪ ಮಾಡಿಸಿದ್ದಾರೆಂದು ಬರೆದು ಕೊಡುವಂತೆ ಪೊಲೀಸರು ಒತ್ತಾಯಿಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ವಕೀಲ ಜಗದೀಶ್ ಜೊತೆ ವಿಡಿಯೋ ಕಾಲ್ ಮೂಲಕ ಮಹಿಳೆ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕನ ವಿರುದ್ಧ ಮಹಿಳೆಯಿಂದ ದೌರ್ಜನ್ಯ ಆರೋಪ: ನಾನು ತಪ್ಪೇ ಮಾಡಿಲ್ಲ ಎಂದ ತೆಲ್ಕೂರ
ಶಾಸಕರು ನೀಡಿದ ದೂರಿನಲ್ಲಿ ಏನಿದೆ ?:ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿ 2009 ರಲ್ಲಿ ಮೊದಲಿಗೆ ಪರಿಚಯವಾದರು. 2013 ರಲ್ಲಿ ಜಮೀನು ವ್ಯಾಜ್ಯದ ಇತ್ಯರ್ಥಕ್ಕೆ ದಂಪತಿ ಸಹಾಯ ಪಡೆದುಕೊಂಡಿದ್ದರು. ನಂತರ ದಂಪತಿ ಪುತ್ರನ ಸ್ಕೂಲ್ ಅಡ್ಮಿಶನ್ಗೆ ಸಹಾಯ ಪಡೆದಿದ್ದರು. 2018 ರಂದು ಫೇಸ್ಬುಕ್ ಮೆಸೇಂಜರ್ ಮೂಲಕ ಮೊದಲ ಬಾರಿಗೆ ಮಹಿಳೆಯು ಪ್ರಾಣ ಬೆದರಿಕೆ ಹಾಕಿ ಮರ್ಯಾದೆಗೆ ಧಕ್ಕೆ ತರುವಂತಹ ಸಂದೇಶ ರವಾನಿಸಿದ್ದಳು.
2018 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನನ್ನ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ಯಾವುದೇ ದೂರನ್ನ ನೀಡದೇ ಹಣಕ್ಕೆ ಬೇಡಿಕೆಯಿಟ್ಟಿದ್ದರು. 2021ರ ಮಾರ್ಚ್ನಲ್ಲಿ ಶಾಸಕರನ್ನ ಭೇಟಿಯಾಗಿ ಅವರ ಬೇಡಿಕೆಗಳನ್ನ ಈಡೇರಿಸುವಂತೆ ಕೇಳಿಕೊಂಡಿದ್ದರು. ಅನಂತರ ಶಾಸಕರಿಂದ ಮಗುವಾಗಿದೆ, ನನ್ನ ಹಾಗೂ ಮಗುವನ್ನ ನೋಡಿಕೊಳ್ಳಲು 2 ಕೋಟಿ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಳು.
ಬಳಿಕ ಫೇಸ್ಬುಕ್ ಮೆಸೇಂಜರ್ಗಳ ಮೂಲಕ ಸಂದೇಶ ಕಳಿಸಿ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದಾರೆ. ನನ್ನ ರಾಜಕೀಯ ವಿರೋಧಿಗಳು ಮಹಿಳೆ ಜೊತೆ ಸೇರಿದ್ದಾರೆ. ನನ್ನ ಮರ್ಯಾದೆಯನ್ನ ಹಾಳು ಮಾಡಿದರೆ, 1 ಕೋಟಿ ಹಣ ಆಕೆಗೆ ನೀಡೋದಾಗಿ ಹೇಳಿರುವುದು ತಿಳಿದು ಬಂದಿದೆ. ದುರುದ್ದೇಶದಿಂದ 2 ಕೋಟಿ ಹಣಕ್ಕೆ ಡಿಮ್ಯಾಂಡ್ ಇಟ್ಟಿರುವ ಮಹಿಳೆ ಹಾಗೂ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.