ಬೆಂಗಳೂರು:ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ 1,967 ಮನೆಗಳನ್ನು ಜುಲೈ 25ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ನಗರದ ದಾಸರಹಳ್ಳಿ, ಯಲಹಂಕ, ಬ್ಯಾಟರಾಯನಪುರ, ಮಹಾದೇವಪುರ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಿಸಲಾಗುತ್ತಿರುವ ಬಹುಮಹಡಿ ಕಟ್ಟಡಗಳ ಕಾಮಗಾರಿ ಸ್ಥಳಕ್ಕೆ ವಸತಿ ಸಚಿವ ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಸೂರಿಲ್ಲದವರಿಗೆ ಸೂರು' ಎಂಬ ಧ್ಯೇಯದಡಿ 2016-17 ಮತ್ತು 2017-18 ರಲ್ಲಿ 'ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ'ಗೆ ಕೇಂದ್ರ ಸರ್ಕಾರವು ಪ್ರತಿ ಮನೆಯ ನಿರ್ಮಾಣಕ್ಕೆ 1.50 ಲಕ್ಷ ರೂ.ಗಳನ್ನು ನೀಡಲಿದ್ದು, ಅದರಂತೆ 1 ಲಕ್ಷ ಮನೆಗಳ ನಿರ್ಮಾಣಕ್ಕೆ ರೂ. 1,500 ಕೋಟಿ ಅನುದಾನ ನಿಗದಿಯಾಗಿದೆ. ಈ ಪೈಕಿ ಮೊದಲನೇ ಕಂತಿನ ರೂ. 600 ಕೋಟಿ ಅನುದಾನ ಬಿಡುಗಡೆಯಾಗಿ, ಕಂದಾಯ ಇಲಾಖೆಯಿಂದ 553 ಎಕರೆ ಜಮೀನನ್ನು ನಿಗಮಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದರು.
ಅರ್ಹ ಬಡವರಿಗೆ ಮನೆ: ವಸತಿ ಇಲಾಖೆ ನಿರ್ಮಿಸುತ್ತಿರುವ ಮನೆಗಳನ್ನು ಕೂಲಿ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ಬೀಡಿ ಕಟ್ಟುವವರು, ಬೀದಿ ಬದಿ ವ್ಯಾಪಾರಿಗಳು ಸೇರಿ ಅರ್ಹ ಬಡವರಿಗೆ ಮನೆಗಳನ್ನು ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಜನರು ರೂ.5.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 5 ಲಕ್ಷ ರೂ. ಪಾವತಿಸಬೇಕಾಗಿದ್ದು, ಮಧ್ಯಮ ವರ್ಗದವರು ಯಾವ ರೀತಿಯಲ್ಲಿ ಜೀವನ ನಡೆಸುತ್ತಾರೋ ಅದೇ ರೀತಿಯಲ್ಲಿ ಬಡವರು ಸಹ ಬದುಕಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.