ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಸಂಖ್ಯೆ ಹೆಚ್ಚಾಗುತ್ತಿದೆ. ವೀಸಾ ಅವಧಿ ಮುಗಿದರೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರ ಪ್ರಮಾಣ ಅಧಿಕವಾಗುತ್ತಿದೆ. ಇವರನ್ನು ಬಂಧಿಸಿ ವಿದೇಶಕ್ಕೆ ಹಿಂತಿರುಗಿಸಲು ಕಳೆದ ಮೂರು ವರ್ಷಗಳ ಹಿಂದೆ ತೆರೆಯಲಾಗಿದ್ದ ವಿದೇಶಿ ನಿರ್ಬಂಧ ಕೇಂದ್ರದಲ್ಲಿದ್ದ 195 ವಿದೇಶಿ ಮೂಲದ ಅಕ್ರಮ ವಾಸಿಗಳಗಳನ್ನು ಗಡಿಪಾರು ಮಾಡಲಾಗಿದೆ. 195 ವಿದೇಶಿಯರ ಪೈಕಿ 124 ಜನ ಪುರುಷರು ಹಾಗೂ 71 ಜನ ಮಹಿಳಾ ಆರೋಪಿಗಳಿದ್ದಾರೆ.
ಶಿಕ್ಷಣ, ವ್ಯಾಪಾರ ಹಾಗೂ ಪ್ರವಾಸ ಸೇರಿದಂತೆ ವಿವಿಧ ಕಾರಣಗಳಿಗಾಗಿ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ನೆಲೆಸಿ ಡ್ರಗ್ಸ್, ವೇಶ್ಯಾವಾಟಿಕೆ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ನೈಜಿರಿಯಾ, ಉಗಾಂಡ, ಸೂಡಾನ್ ಸೇರಿದಂತೆ ಅಫ್ರಿಕಾ ಖಂಡದ ವಿವಿಧ ಆರೋಪಿಗಳನ್ನು ಗಡಿಪಾರು ಮಾಡಲಾಗುತ್ತಿದೆ.
ಎಫ್.ಆರ್.ಆರ್.ಓ (ವಿದೇಶಿಗರ ಪ್ರಾದೇಶಿಕ ನೋಂದಣಿ ಕೇಂದ್ರ) ದ ದಾಖಲೆಗಳ ಪ್ರಕಾರ ಈ ವರ್ಷದ ಮಾರ್ಚ್ ಅಂತ್ಯದವರೆಗೂ ಹಾಗೂ 59 ಜನ ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ. 2022ರಲ್ಲಿ 77 ಜನ 2021ರಲ್ಲಿ 59 ಜನರನ್ನು ಭಾರತದಿಂದ ಅವರವರ ತವರಿಗೆ ಗಡಿಪಾರು ಮಾಡಲಾಗಿದೆ. ವಿದೇಶಿ ಅಕ್ರಮ ವಾಸಿಗಳಿಗಾಗಿ 2019ರಲ್ಲಿ ನೆಲಮಂಗಲದಲ್ಲಿ ವಸತಿ ಕೇಂದ್ರ ತೆರೆಯಲಾಗಿದ್ದು, ಅಕ್ರಮ ವಾಸಿಗಳನ್ನು ಬಂಧಿಸಿದ ಬಳಿಕ ವಸತಿ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ಬಳಿಕ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಅವರವರ ದೇಶಗಳಿಗೆ ರವಾನಿಸಲಾಗುತ್ತಿದೆ.
ರೌಡಿಶೀಟರ್ ನಾಗ ಗಡಿಪಾರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಕ್ರಿಯನಾಗಿದ್ದ ನಟೋರಿಯಸ್ ರೌಡಿ ನಾಗರಾಜ್ ಆಲಿಯಾಸ್ ವಿಲ್ಸನ್ ಗಾರ್ಡನ್ ನಾಗನನ್ನು ಮಾ.30ರಂದು ಗಡಿಪಾರು ಮಾಡಲಾಗಿದೆ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಗಡಿಪಾರಿನ ಪ್ರಕ್ರಿಯೆ ಮುಗಿಸಿ ಆರು ತಿಂಗಳು ನಗರಕ್ಕೆ ಬರದಂತೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದ್ದಾರೆ.