ಕರ್ನಾಟಕ

karnataka

ETV Bharat / state

ಬೊಕ್ಕಸ ಹೊರೆ : ನಷ್ಟದ ಹಾದಿಯಲ್ಲೇ ಮುಂದುವರಿಯುತ್ತಿರುವ 19 ಸಾರ್ವಜನಿಕ ಉದ್ದಿಮೆಗಳು ! - public enterprises latest news

ರಾಜ್ಯದಲ್ಲಿನ ಒಟ್ಟು 60 ಸಾರ್ವಜನಿಕ ಉದ್ದಿಮೆಗಳಲ್ಲಿ (ನಿಗಮ) ಒಟ್ಟು 19 ನಿಗಮಗಳು ನಷ್ಟ ಅನುಭವಿಸುತ್ತಿದೆ. ಕಳೆದ ಆರೇಳು ವರ್ಷಗಳಿಂದ ಈ ನಿಗಮಗಳು ನಷ್ಟದ ಹಾದಿಯನ್ನೇ ತುಳಿತಾನೇ ಇದೆ. ಇದರಲ್ಲಿ ನಾಲ್ಕು ಸಾರಿಗೆ ನಿಗಮಗಳು ನಿರಂತರವಾಗಿ ನಷ್ಟವನ್ನೇ ಅನುಭವಿಸುತ್ತಿವೆ.

19 public enterprises continue to run at a loss
ಸಂಗ್ರಹ ಚಿತ್ರ

By

Published : Dec 23, 2020, 7:04 AM IST

ಬೆಂಗಳೂರು:ರಾಜ್ಯ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿಯನ್ನು ಸಾರ್ವಜನಿಕ ಉದ್ದಿಮೆಗಳಿಗಾಗಿ ಅನುದಾನ ನೀಡುತ್ತಿದೆ. ಆದರೆ, ಕೆಲ ಸಾರ್ವಜನಿಕ ಉದ್ದಿಮೆಗಳು ನಷ್ಟ ಅನುಭವಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಇದು ಹೊರೆಯಾಗಿ ಪರಿಣಮಿಸುತ್ತಿದೆ.

ಕರ್ನಾಟಕ ಒಟ್ಟು 60 ಸಾರ್ವಜನಿಕ ಉದ್ದಿಮೆಗಳನ್ನು ಹೊಂದಿದೆ. ಈ ಸಾರ್ವಜನಿಕ ಉದ್ದಿಮೆಗಳಿಗೆ ಸರ್ಕಾರ ಕೋಟ್ಯಂತರ ರೂ.‌ ಅನುದಾನ ನೀಡುತ್ತದೆ. ಸಾರ್ವಜನಿಕ ಉದ್ದಿಮೆಗಳ‌ ಪುನಶ್ಚೇತನಕ್ಕಾಗಿಯೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಸಾರ್ವಜನಿಕ ಉದ್ದಿಮೆಗಳ ಕಾರ್ಯದಕ್ಷತೆ ಹೆಚ್ಚಿಸಲು ಮತ್ತು ಲಾಭದಾಯಕವಾಗಿಸಲು ಹಣಕಾಸಿನ ನೆರವನ್ನು ಕಾಲ ಕಾಲಕ್ಕೆ ನೀಡುತ್ತಾ ಬಂದಿದೆ. ಆದರೆ, ಈಗಲೂ ಹಲವು ಸಾರ್ವಜನಿಕ ಉದ್ದಿಮೆಗಳು ನಷ್ಟದ ಹಾದಿಯಲ್ಲೇ ಇವೆ.

ಸಾರ್ವಜನಿಕ ಉದ್ದಿಮೆಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನವನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ/ಖಾಸಗಿ ಸಂಸ್ಥೆಗಳ ಮೂಲಕ ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ಮಾಡಿಸುತ್ತದೆ. ಪ್ರತಿ ವರ್ಷ 10 ಸಾರ್ವಜನಿಕ ಉದ್ದಿಮೆಗಳನ್ನು ಮೌಲ್ಯಮಾಪನ‌ ಮಾಡಿಸಲಾಗುತ್ತದೆ. 2019-20 ನೇ ಸಾಲಿನ ಆಯವ್ಯಯದಲ್ಲಿ ಸದರಿ ಕಾರ್ಯಕ್ರಮಕ್ಕೆ 30 ಲಕ್ಷಗಳನ್ನು ನಿಗದಿಪಡಿಸಲಾಗಿತ್ತು. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಆದರೆ, ಈ ಹಿಂದಿನ ವರದಿಗಳಲ್ಲಿ ಹಲವು ಲೋಪದೋಷಗಳನ್ನು ಉಲ್ಲೇಖಿಸಿದರೂ ಅದರಲ್ಲಿ ಯಾವುದೇ ಸುಧಾರಣೆ ತರುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಕೆಲ ನಿಗಮಗಳು ಹಲವು ವರ್ಷಗಳಿಂದ ನಷ್ಟದ ಹಾದಿಯಲ್ಲೇ ಮುಂದುವರಿದಿದೆ.

ಇದನ್ನೂ ಓದಿ : ಸಾರಿಗೆ ಇಲಾಖೆ ನಷ್ಟಕ್ಕೆ ಸರ್ಕಾರವೇ ಹೊಣೆ: ಕಾಂಗ್ರೆಸ್ ಆರೋಪ

ಕಳೆದ 10 ವರ್ಷಗಳಲ್ಲಿ ಈ ನಿಗಮಗಳಿಗೆ ಸರ್ಕಾರ ಸುಮಾರು 1.04 ಲಕ್ಷ ಕೋಟಿ ರೂ.‌ ಅನುದಾನ ನೀಡಿದೆ. ಈ ಪೈಕಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಸೇವಾ ಕ್ಷೇತ್ರದ ನಿಗಮಗಳಾಗಿರುವುದರಿಂದ ಲಾಭ ನಷ್ಟದ ಪ್ರಶ್ನೆ ಬರುವುದಿಲ್ಲ.

ಯಾವ ನಿಗಮಗಳು ನಷ್ಟದ ಹಾದಿಯಲ್ಲಿ:

ರಾಜ್ಯದಲ್ಲಿನ ಒಟ್ಟು 60 ಸಾರ್ವಜನಿಕ ಉದ್ದಿಮೆಗಳಲ್ಲಿ (ನಿಗಮ) ಒಟ್ಟು 19 ನಿಗಮಗಳು ನಷ್ಟ ಅನುಭವಿಸುತ್ತಿವೆ. ಕಳೆದ ಆರೇಳು ವರ್ಷಗಳಿಂದ ಈ ನಿಗಮಗಳು ನಷ್ಟದ ಹಾದಿಯನ್ನೇ ತುಳಿತಾನೇ ಇವೆ. ಇದರಲ್ಲಿ ನಾಲ್ಕು ಸಾರಿಗೆ ನಿಗಮಗಳು ನಿರಂತರವಾಗಿ ನಷ್ಟವನ್ನೇ ಅನುಭವಿಸುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ, ಕೆಎಸ್ಆರ್ ಟಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ನಿರಂತರ ನಷ್ಟವನ್ನು ಅನುಭವಿಸುತ್ತಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ತಿಳಿಸಿದೆ.

ಈ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಮಾಸಿಕ ವೆಚ್ಚ ಸುಮಾರು 619.3 ಕೋಟಿ ರೂ. ಇದೆ. ಅದರಲ್ಲಿ ಕೆಎಸ್ಆರ್ ಟಿಸಿಗೆ ಪ್ರತಿ ತಿಂಗಳು 321 ಕೋಟಿ ರೂ. ವೆಚ್ಚ ತಗುಲುತ್ತಿದೆ. ಕೋವಿಡ್ 19 ಬರುವವರೆಗೆ ಈ ರಸ್ತೆ ಸಾರಿಗೆ ನಿಗಮಗಳು ಬಹುತೇಕ ತನ್ನ ವೆಚ್ಚವನ್ನು ತಾನೇ ಭರಿಸುತ್ತಿತ್ತು. ಆದರೆ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಸರ್ಕಾರವೇ ಈ ನಿಗಮಗಳ ನೌಕರರಿಗೆ ವೇತನದ ಹಣವನ್ನು ನೀಡಬೇಕಾಯಿತು. ಈ ಪೈಕಿ ಎನ್‌ಇ‌ಕೆಎಸ್ಆರ್ ಟಿಸಿ 178.49 ಕೋಟಿ ರೂ., ಎನ್ ಡಬ್ಲ್ಯು ಕೆಎಸ್ಆರ್ ಟಿಸಿ 46 ಕೋಟಿ ರೂ., ಹಾಗೂ ಬಿಎಂಟಿಸಿ 73.20 ಕೋಟಿ ರೂ. ವೆಚ್ಚ ಭರಿಸಿದೆ.

ಇದನ್ನೂ ಓದಿ : ಸಾರಿಗೆ ನೌಕರರ 4 ದಿನದ ಮುಷ್ಕರದಿಂದ ಬಿಎಂಟಿಸಿಗೆ 9 ಕೋಟಿ ರೂ. ನಷ್ಟ: ರಾಜೇಶ್

ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ನಿಗಮಗಳಾದ ಮೈಸೂರು ಪೇಪರ್ ಮಿಲ್ಸ್ ನಿಯಮಿತ ಮತ್ತು ಮೈಸೂರು ಶುಗರ ಕಂಪನಿ ನಿರಂತರ ನಷ್ಟದ ಹಾದಿ ತುಳಿಯುತ್ತಿವೆ. ಮೈ ಶುಗರ್ ಸಂಸ್ಥೆ ಕಾರ್ಖಾನೆಗಳಲ್ಲಿನ ಸಕ್ಕರೆ ಸಂಗ್ರಹವನ್ನು ಮಾರಾಟ ಮಾಡಿ ತನ್ನ ಉದ್ಯೋಗಿಗಳ ವೇತನ ಪಾವತಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಸ್ಥೆಗಳ ಪುನಶ್ಚೇತನಕ್ಕಾಗಿ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಇದುವರೆಗೆ ಯಾವುದೇ ಫಲವನ್ನು ನೀಡುತ್ತಿಲ್ಲ.

ನಷ್ಟದಲ್ಲಿರುವ ನಿಗಮಗಳ ವಿವರ:

  • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
  • ಬೆಂಗಳೂರು ಮಹಾನಗರ ಸಾರಿಗೆ ನಿಗಮ
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
  • ಕರ್ನಾಟಕ ನೀರಾವರಿ ನಿಗಮ ನಿಯಮಿತ
  • ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ
  • ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ
  • ಮೈಸೂರು ಕಾಗದ ಕಾರ್ಖಾನೆ ನಿಯಮಿತ-ಮೈಸೂರು ಸಕ್ಕರೆ ಕಾರ್ಖಾನೆ ಕಂಪನಿ ನಿಯಮಿತ
  • ಎನ್‌ಜಿಇಎಫ್ (ಹುಬ್ಬಳ್ಳಿ) ನಿಯಮಿತ
  • ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ
  • ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
  • ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ
  • ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕಲ್)
  • ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
  • ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ
  • ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ನಿಗಮ ನಿಯಮಿತ
  • ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ
  • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ

37 ನಿಗಮಗಳು ಲಾಭದ ಹಾದಿಯಲ್ಲಿ:

ಒಟ್ಟು 60 ನಿಗಮಗಳ ಪೈಕಿ 37 ನಿಗಮಗಳು ಲಾಭ ಮಾಡುತ್ತಿರುವುದು ನಿಟ್ಟುಸಿರು ಬಿಡುವ ವಿಚಾರವಾಗಿದೆ. ಇದರಲ್ಲಿ ಪ್ರಮುಖವಾಗಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ನಿಯಮಿತ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ ಲಿಮಿಟೆಡ್), ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ, ಎಂಎಸ್ ಐಎಲ್, ಕಾವೇರಿ ನೀರಾವರಿ ನಿಗಮ ನಿಯಮಿತ, ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಯಮಿತ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಸೇರಿ ಒಟ್ಟು 37 ನಿಗಮಗಳು ಲಾಭದಲ್ಲಿವೆ.

ABOUT THE AUTHOR

...view details