ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಡ್ರೋನ್ ಬೆಂಗಳೂರು : ಸೇನೆಗೆ ನೆರವಾಗಲು ಹಾಗೂ ತನ್ನ ಜೇಬಿನಲ್ಲಿ ಇಟ್ಟುಕೊಂಡು ಹೋಗಬಹುದಾದ ಅತಿ ಹಗುರವಾದ ಡ್ರೋನ್ ಬೆಂಗಳೂರು ಟೆಕ್ ಸಮಿಟ್ನಲ್ಲಿ ವೀಕ್ಷಕರ ಗಮನ ಸೆಳೆದಿತ್ತು. ಮೊಬೈಲ್ ಮಾದರಿಯಲ್ಲಿರುವ ಈ ಡ್ರೋನ್ ನಿಮ್ಮ ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು, ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯಬಹುದಾಗಿದೆ.
ಸೇನೆ ಮತ್ತು ಪೊಲೀಸ್ ಇಲಾಖೆಗೆ ನೆರವಾಗುವುದಕ್ಕಾಗಿಯೇ ಆವಿಷ್ಕಾರ ಮಾಡಿರುವ ಈ ಡ್ರೋನ್, ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬರುವ ಕಡೆ ಹಾಗೆ ಮೇಲೆ ಬಿಸಾಕಿದರೆ ಸಾಕು, ಇದು ಗುಬ್ಬಚ್ಚಿಯಂತೆ ಹಾರಿ ಸುತ್ತಮುತ್ತಲಿನ ಚಿತ್ರಣವನ್ನು ವಿಡಿಯೋ ಮಾಡಿ ರವಾನಿಸಲಿದೆ.
ಭಾರತೀಯ ವಿಜ್ಞಾನ ಸಂಸ್ಥೆೆ (ಐಐಎಸ್ಸಿ)ಯ ಆರ್ಟ್‌ಪಾರ್ಕ್ ಸಹಯೋಗದಲ್ಲಿ ವೇಡಿನ್ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಶತ್ರುಗಳ ಮೇಲೆ ಕಣ್ಗಾವಲಿಡಲು ಆಗಿದ್ದರೂ, ನಗರಪ್ರದೇಶಗಳಲ್ಲೂ ಇದನ್ನು ಬಳಸಿಕೊಳ್ಳಲು ಅವಕಾಶ ಇದೆ ಎಂದು ಸಂಸ್ಥೆೆಯ ಪ್ರತಿನಿಧಿ ತಿಳಿಸಿದರು.
ನೀರು, ಟರ್ಬೈನ್ ಪೈಪ್‌ಗಳಲ್ಲೆೆಲ್ಲಾ ಈ ನ್ಯಾನೋ ಡ್ರೋನ್ ಅನಾಯಾಸವಾಗಿ ಹೋಗಿ, ಅಲ್ಲಿರುವ ಲೋಪದೋಷಗಳನ್ನು ಸಂಗ್ರಹಿಸಬಲ್ಲದು. ಕೇವಲ 30 ಸೆಂ. ಮೀ ಸುತ್ತಳತೆ ಪೈಪ್‌ನಲ್ಲೂ ಇದನ್ನು ಹಾರಿಸಬಹುದಾಗಿದೆ. ಇದರ ತೂಕ ಬರೀ 180 ಗ್ರಾಂ ಆಗಿದೆ. ಎಂಟು ತಿಂಗಳ ಹಿಂದಷ್ಟೇ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಒಮ್ಮೆ ರಿಚಾರ್ಜ್ ಮಾಡಿದರೆ, 25 ನಿಮಿಷ ನಿರಂತರ ಹಾರಾಟ ಮಾಡಬಲ್ಲದು. ಪ್ರತಿ ಸೆಕೆಂಡ್‌ಗೆ ಗರಿಷ್ಠ 25 ಮೀಟರ್ ವೇಗದಲ್ಲಿ ಇದು ಹಾರಾಟ ನಡೆಸುತ್ತದೆ. ಇದರ ಬೆಲೆ ಒಂದು ಲಕ್ಷ ಎಂದು ವಿವರಿಸಿದರು.
ಲ್ಯಾಂಡಿಂಗ್ ಇಲ್ಲದೆಯೂ ನಿಲ್ಲಿಸಬಹುದಾದ ಸಣ್ಣ ಏರೋಪ್ಲೇನ್: ನಗರ ಪ್ರದೇಶಗಳಲ್ಲಿ ತುರ್ತು ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದಕ್ಕಾಗಿ ಐಐಎಸ್ಸಿಯಿಂದ ಮತ್ತೊಂದು ಸಣ್ಣ ಏರೋಪ್ಲೇನ್ ಸಿದ್ದಪಡಿಸಲಾಗಿದೆ. ಈ ಏರೋಪ್ಲೇನ್ ಲ್ಯಾಂಡ್ ಮಾಡುವುದಕ್ಕಾಗಿ ಯಾವುದೇ ರನ್ ವೇ ಅಗತ್ಯವಿಲ್ಲ. ಹೆಲಿಕಾಪ್ಟರ್ ಮಾದರಿಯಲ್ಲಿ ಮೇಲಕ್ಕೆ ಹಾರಿ, ಕೆಳಕ್ಕೆ ಇಳಿಯಲಿದೆ. ಇದರಲ್ಲಿ ಅಂಗಾಂಗ ಬದಲಾವಣೆ ಸಂದರ್ಭದಲ್ಲಿ ಒಂದೇ ನಗರದಲ್ಲಿರುವ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ.
ಕೇಂದ್ರ ಸರ್ಕಾರದಿಂದ ಸ್ತ್ರೀ ಗುಂಪುಗಳಿಗೆ ಡ್ರೋನ್ ನೆರವು :ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಡ್ರೋನ್‌ಗಳನ್ನು ಒದಗಿಸುವ ಕೇಂದ್ರ ವಲಯ ಯೋಜನೆಗೆ ಅಸ್ತು ಎಂದಿದೆ. ಇದು 2024-25 ರಿಂದ 2025-26 ರ ಅವಧಿಗೆ 1261 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಜಾರಿಗೆ ಬರಲಿದೆ.
ಇದನ್ನೂ ಓದಿ:5 ವರ್ಷ ಪಿಎಂಜಿಕೆವೈ ವಿಸ್ತರಣೆ, ಮಹಿಳಾ ಗುಂಪುಗಳಿಗೆ ಡ್ರೋನ್: ಕೇಂದ್ರ ಸಚಿವ ಸಂಪುಟ ಅನುಮೋದನೆ