ಬೆಂಗಳೂರು:ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕ ಸಾರ್ವಜನಿಕಾ ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ ಕ್ಲಬ್ ಮತ್ತು ಪಬ್‌ಗಳ ವಿರುದ್ದ ವಿವಿಧ ಠಾಣೆಗಳಲ್ಲಿ ಪೊಲೀಸರು 18 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ಹೊಟೇಲ್, ಕ್ಲಬ್ ಹಾಗೂ ಪಬ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಸೇರಿದಂತೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ನಗರ ಪೊಲೀಸರು ತಿಳುವಳಿಕೆ ಮೂಡಿಸುತ್ತಿದ್ದರೂ ಹೆಸರಾಂತ ಕ್ಲಬ್ ಮತ್ತು ಪಬ್ಗಳು ನಿಯಮ ಉಲ್ಲಂಘಿಸುತ್ತಿವೆ. ಅವಧಿ ಮೀರಿ ತಡರಾತ್ರಿವರೆಗೂ ಡಿ.ಜೆ ಪಾರ್ಟಿ ನಡೆಸಿ ಶಬ್ಧ ಮಾಲಿನ್ಯ ಮಾಡುತ್ತಿರುವುದಾಗಿ ಸಾರ್ವಜನಿಕರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸುವಂತೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಸೂಚಿಸಿದ್ದರು.
ಈ ಬಗ್ಗೆ ವಿಶೇಷ ತಂಡ ರಚಿಸಿ ದೂರು ಬಂದಿದ್ದ ಹೊಟೇಲ್ ಹಾಗೂ ಕ್ಲಬ್, ಪಬ್ ಗಳನ್ನು ಪರಿಶೀಲಿಸಿದಾಗ ತಡರಾತ್ರಿವರೆಗೂ ಡಿಜೆ ಪಾರ್ಟಿ ಮಾಡಿರುವುದು ಗೊತ್ತಾಗಿದೆ. ಕೆಲ ಹೊಟೇಲ್‌ಗಳಲ್ಲಿ ಸಿಸಿಟಿವಿ ಅಫ್ ಮಾಡಿ ಪಾರ್ಟಿ ಮಾಡಿರುವುದು ಕಂಡು ಬಂದರೆ, ಇನ್ನೂ ಕೆಲವು ಹೊಟೇಲ್‌ಗಳಲ್ಲಿ ಹೆಸರಿಗಷ್ಟೇ ಸಿಸಿಟಿವಿ ಇರುವುದು ಕಂಡು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.