ಬೆಂಗಳೂರು: ನಗರದಲ್ಲಿ ರೌಡಿ ಚಟುವಟಿಕೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಜೈಲಿನಲ್ಲಿ ಕುಳಿತು ಸಂಚು ರೂಪಿಸುತ್ತಿದ್ದ 17 ರೌಡಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಿದ್ದಾರೆ.
ನಗರದ ಸೆಂಟ್ರಲ್ ಜೈಲಿನಿಂದಲೇ ಸುಪಾರಿ ಕೊಡುತ್ತಿದ್ದ ಕುಖ್ಯಾತ ರೌಡಿಶೀಟರ್ಗಳನ್ನು ರಾತ್ರೋರಾತ್ರಿ ಬೇರೆ ಜೈಲಿಗೆ ಸ್ಥಳಾಂತರಿಸಿದ್ದಾರೆ. ಶಿಫ್ಟ್ ಮಾಡುವ ವೇಳೆ ಜೈಲು ಸಿಬ್ಬಂದಿ ಜೊತೆ ರೌಡಿಶೀಟರ್ಗಳು ಕ್ಯಾತೆ ತೆಗೆದಿದ್ದಾರೆ ಎನ್ನಲಾಗಿದೆ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿ ಅರುಣ್, ನಟೋರಿಯಸ್ ರೌಡಿ ಶೀಟರ್ ನಾಗನನ್ನು ಕಲಬುರಗಿ ಜೈಲಿಗೆ ಕಳುಹಿಸಲಾಗಿದೆ. ಇನ್ನು ನಾಗರಾಜ್, ಪೂರ್ಣೇಶ್, ಕಾಣಿಕ್ ರಾಜ್, ಕಮಲ್ ಆರ್ ಅಲಿಯಾಸ್ ಮಿಠಾಯಿ ಎಂಬವರನ್ನು ಕೇಂದ್ರ ಕಾರಾಗೃಹ ಕಲಬುರಗಿಗೆ ಸ್ಥಳಾಂತರಿಸಲಾಗಿದೆ.
ಇನ್ನುಳಿದಂತೆ ಶಿವ ಮತ್ತು ದಿನೇಶ್ನನ್ನು ಬೆಳಗಾವಿ ಜೈಲಿಗೆ, ಪ್ರದೀಪ್, ಬಾಂಬೆ ಸಲೀಂ ಮತ್ತು ಅರುಣ್ನನ್ನು ಧಾರವಾಡ ಜೈಲಿಗೆ, ಬಂಡೆ ನವೀನ್, ಕುಳ್ಳ ಜಪಾನಿ ಅರುಣ್ ಮತ್ತು ಅಮಾವಾಸ್ಯೆ ಸತೀಶ್ನನ್ನು ಶಿವಮೊಗ್ಗ ಜೈಲಿಗೆ, ಕಾರ್ತಿಕ್ ಮತ್ತು ಆನಂದ್ ಮೈಸೂರು ಜೈಲಿಗೆ, ಜಾರ್ಜ್ ಮೈಕಲ್ ಮತ್ತು ಸರವಣ ಬಳ್ಳಾರಿ ಜೈಲಿಗೆ, ದೇವರಾಜ್ ಮತ್ತು ಧನಶೇಖರ್ನನ್ನು ವಿಜಯಪುರದ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ವಿಲ್ಸನ್ ಗಾರ್ಡನ್ ರೌಡಿಶೀಟರ್ ನಾಗ ಮತ್ತು ಶಿವು ಜೈಲಿನೊಳಗಿಂದಲೇ ಸ್ಕೆಚ್ ಹಾಕುತ್ತಿದ್ದರಂತೆ. ಅಷ್ಟೇ ಅಲ್ಲದೆ ಪರಪ್ಪನ ಅಗ್ರಹಾರದಲ್ಲಿ ರೌಡಿಶೀಟರ್ ನಾಗನ ಶಿಷ್ಯಂದಿರು 40 ಮಂದಿ ಹಾಗೂ ರೌಡಿಶೀಟರ್ ಶಿವು ಶಿಷ್ಯಂದಿರು 17 ಮಂದಿ ಇದ್ದಾರೆ.
ಕೋರಮಂಗಲದಲ್ಲಿ ಇತ್ತೀಚೆಗೆ ಆದ ಬಬ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದರ ಸ್ಕೆಚ್ ಜೈಲಿನಲ್ಲೇ ನಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಕಮಿಷನರ್ ಕಮಲ್ ಪಂತ್, ಈ ಬಗ್ಗೆ ಕಾರಾಗೃಹ ಎಡಿಜಿಪಿ ಅಲೋಕ್ ಮೋಹನ್ ಜೊತೆ ಚರ್ಚೆ ಮಾಡಿದ್ದರು. ಇದಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.