ಬೆಂಗಳೂರು:ತೂಕದ ಸ್ಕೇಲ್‌ನಲ್ಲಿ ಚಿಪ್ ಅಳವಡಿಸಿ ಗ್ರಾಹಕರಿಗೆ ವಂಚಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಹದಿನೇಳು ಜನ ಆರೋಪಿಗಳನ್ನ ಬಂಧಿಸಿದ್ದಾರೆ. ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿ, ಕೋಳಿ ಮೀನು ಮಾಂಸ ಮಾರಾಟ ಅಂಗಡಿಗಳಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದ ಸೋಮಶೇಖರ್, ನವೀನ್ ಕುಮಾರ್, ವಿನೇಶ್ ಪಟೇಲ್, ರಾಜೇಶ್ ಕುಮಾರ್, ವ್ಯಾಟರಾಯನ್, ಮೇಘನಾಧಮ್, ಲೋಕೆಶ್ ಕೆ, ಲೋಕೆಶ್ ಎಸ್.ಆರ್, ಗಂಗಾಧರ್, ಚಂದ್ರಶೇಖರಯ್ಯ, ಅನಂತಯ್ಯ, ರಂಗನಾಥ್, ಶಿವಣ್ಣ, ಸನಾವುಲ್ಲಾ, ವಿಶ್ವನಾಥ್, ಮಹಮದ್ ಈಶಾಕ್, ಹಾಗೂ ಮಧುಸೂಧನ್ ಬಂಧಿತ ಆರೋಪಿಗಳು.
ವಂಚನೆ ಮಾಡುತ್ತಿದ್ದದ್ದು ಹೇಗೆ?ಮಾಪನ ಶಾಸ್ತ್ರ ಇಲಾಖೆಯಿಂದ ಪರವಾನಗಿ ಪಡೆದು ಸ್ಕೇಲ್ ಸರ್ವಿಸ್ ಮಾಡುವ ಕೆಲಸ ಮಾಡುತ್ತಿದ್ದ ಸೋಮಶೇಖರ್ ಮತ್ತು ನವೀನ್ ಕುಮಾರ್, ಯೂಟ್ಯೂಬ್ ನೋಡಿ ತೂಕದ ಯಂತ್ರದಲ್ಲಿ ವೈಯರ್ ಬದಲಾವಣೆ ಮಾಡುವುದನ್ನ ಕಲಿತುಕೊಂಡಿದ್ದರು. ತೂಕದ ಯಂತ್ರದಲ್ಲಿನಿ ಪಿಸಿಬಿ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್) ಚಿಪ್ನಲ್ಲಿ ಬದಲಾವಣೆ ಮಾಡಿ ಸ್ಕೇಲ್‌ನಲ್ಲಿ ಹೆಚ್ಚುವರಿ ಬಟನ್ ಹಾಗೂ ರಿಮೋಟ್ ಅಳವಡಿಸುತ್ತಿದ್ದರು. ಇದೇ ರೀತಿ ಎರಡ್ಮೂರು ವರ್ಷಗಳಿಂದ ತೂಕದ ಸ್ಕೇಲ್‌ನಲ್ಲಿ ಮಾರ್ಪಾಡು ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದರು.
ಇಬ್ಬರು ಗ್ರಾಹಕರಿಂದ ಬಂದ ಮಾಹಿತಿ ಮೇರೆಗೆ ವಿಶೇಷ ತಂಡ ರಚಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಿವಿಧ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳ ಪೈಕಿ ನವೀನ್ ಕುಮಾರ್, 2020ರಲ್ಲಿಯೂ ತೂಕದ ಸ್ಕೇಲ್‌ನಲ್ಲಿ ಬದಲಾವಣೆ ಮಾಡಿ ಸಿಕ್ಕಿಬಿದ್ದಿದ್ದ. ಕೆ.ಪಿ ಅಗ್ರಹಾರ ಠಾಣೆಯಲ್ಲಿ ಆರೋಪಿತನ ವಿರುದ್ಧ ದೂರು ದಾಖಲಾಗಿತ್ತು. ದೂರು ನೀಡಿದ್ದ ಅಸಿಸ್ಟೆಂಟ್ ಕಂಟ್ರೋಲರ್ ಗೆ ಆರೋಪಿ ಬೆದರಿಕೆ ಹಾಕಿದ್ದ ಕುರಿತು ವಿಧಾನಸೌಧ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.