ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುಮಾರು 17 ಮಂದಿಗೆ ಕಾಲರಾ ರೋಗ ಪತ್ತೆಯಾಗಿದ್ದು, ಸದ್ಯ ಪಾಲಿಕೆ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ.
ಒಟ್ಟು 17 ಜನರಿಗೆ ಕಾಲರಾ ಇರುವುದನ್ನು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಖಚಿತ ಪಡಿಸಿದ್ದಾರೆ. ದಕ್ಷಿಣ ವಲಯದಿಂದ 8, ಪೂರ್ವ ವಲಯದಿಂದ 7 ಮತ್ತು ಪಶ್ಚಿಮ ವಲಯದಿಂದ 2 ಪ್ರಕರಣಗಳು ಪತ್ತೆಯಾಗಿವೆ. ರೋಗ ಪತ್ತೆಯಾದ ಪ್ರತಿ ಮನೆಗೂ ಭೇಟಿ ನೀಡಿ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಕಾಲರಾ ಕಲುಷಿತ ನೀರಿನಿಂದ ಬರುವ ಖಾಯಿಲೆಯಾಗಿದ್ದು, ಎಲ್ಲಾ ಪ್ರಕರಣಗಳೂ ಒಂದೇ ಕಡೆ ಇಲ್ಲ. ಇದರಿಂದ ಅಪಾಯಕಾರಿ ಪರಿಸ್ಥಿತಿ ಇಲ್ಲ ಎಂದು ಕಮಿಷನರ್ ತಿಳಿಸಿದರು.
ಬೆಂಗಳೂರಿನ 17 ಜನರಲ್ಲಿ ಕಾಲರಾ ರೋಗ ಪತ್ತೆ ಈ ರೋಗ ಪತ್ತೆಯಾದ 17 ರೋಗಿಗಳೂ ಮನೆಯ ನೀರು ಕುಡಿದು ಕಾಲರಾ ಪೀಡಿತರಾಗಿದ್ದಾರಾ ಅಥವಾ ಹೋಟೆಲ್ ಮುಂತಾಡೆದೆ ಕುಡಿದ ನೀರಿನಿಂದ ರೋಗಗ್ರಸ್ಥರಾಗಿದ್ದಾರಾ ಗೊತ್ತಾಗಿಲ್ಲ. ಅವರೆಲ್ಲರ ರಕ್ತದ ಸೂಕ್ಷ್ಮ ಪರೀಕ್ಷೆಗೆ ನೀಡಿದ್ದೇವೆ. ಅದರ ರಿಪೋರ್ಟ್ ಬಂದ ಮೇಲಷ್ಟೇ ರೋಗಾಣುವಿನ ಮೂಲ ತಿಳಿಯಬೇಕಿದೆ. ಎರಡು ವರ್ಷಗಳಿಂದ ಬಿಬಿಎಂಪಿ ವಲಯದಲ್ಲಿ ಕಾಲರಾ ಪ್ರಕರಣಗಳು ಇರಲಿಲ್ಲ. ಅನುಮಾನವಿರುವ ಕಡೆ ನೀರಿನ ಸ್ಯಾಂಪಲ್ ಕೂಡಾ ಶೇಖರಣೆ ಮಾಡಿ ಲ್ಯಾಬ್ಗೆ ಕಳಿಸಲಾಗಿದೆ. ಅದರ ರಿಪೋರ್ಟ್ ಬಂದ ಮೇಲೆ ನಿರ್ದಿಷ್ಟ ಕಾರಣ ತಿಳಿಯಲಿದೆ ಎಂದಿದ್ದಾರೆ.
ಯಾವ ರೋಗಿಯ ಜೀವಕ್ಕೂ ಅಪಾಯವಿಲ್ಲ. ಎಲ್ಲರೂ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕಾಡಬೀಸನಹಳ್ಳಿ ಮುಂತಾದೆಡೆ ಕಾಲರಾ ಪ್ರಕರಣಗಳು ಕಾಣಿಸಿಕೊಂಡಿವೆ. ಯಾವುದೂ ಗಂಭೀರ ಪ್ರಕರಣವಿಲ್ಲ. ಜನ ಕಾಯಿಸಿ ಆರಿಸಿದ ನೀರನ್ನೇ ಬಳಸಬೇಕು. ಬೇಸಿಗೆಯಲ್ಲಿ ಕಾಲರಾ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದಾದರೂ ಮೋರಿಯ ಲೈನ್ ಸೋರಿಕೆಯಾಗಿ ಕುಡಿಯುವ ನೀರಿನ ಜೊತೆಗೆ ಬೆರೆಯುತ್ತಿದ್ದರೆ, ತಕ್ಷಣ ದುರಸ್ತಿ ಮಾಡುವಂತೆ ಕೋರಿ ಬಿಬಿಎಂಪಿ ಕಮಿಷನರ್ ಬಿಡಬ್ಲ್ಯು ಎಸ್ಎಸ್ಬಿಗೆ ಪತ್ರ ಬರೆದಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ಬಿಬಿಎಂಪಿ ಕಡೆಯಿಂದ ನಡೆಯುತ್ತಿವೆ ಎಂದು ಪಾಲಿಕೆಯ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.