ಬೆಂಗಳೂರು :ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಆದಾಯ ಹಂಚಿಕೆಯ ಸೂತ್ರವನ್ನು ಶಿಫಾರಸು ಮಾಡುವುದಕ್ಕೆ ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ಜಾರಿಯಾಗುತ್ತದೆ. ಈ ಹಿಂದಿನ 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಪ್ರಸುತ್ತ 16 ನೇ ಹಣಕಾಸು ಆಯೋಗದಲ್ಲಿ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಲಿದ್ದೇವೆ. ಜಿಎಸ್ಟಿ ಕೌನ್ಸಿಲ್ನಲ್ಲಿಯೂ ಈ ಹಿಂದೆ ರಾಜ್ಯಕ್ಕೆ ಆಗಿರುವ ಅನ್ಯಾಯ ಎತ್ತಿ ತೋರಿಸಿ, ಮತ್ತೆ ಅನ್ಯಾಯ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಿದ್ದೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
15 ನೇ ಹಣಕಾಸು ಆಯೋಗ ರಚಿಸಿ ರಾಜ್ಯಗಳು ಕೊಡುವ ತೆರಿಗೆಯಲ್ಲಿ ಕೇಂದ್ರದ ಪಾಲು ಎಷ್ಟು? ರಾಜ್ಯಕ್ಕೆ ಎಷ್ಟು? ಎನ್ನುವ ತೀರ್ಮಾನ ಮಾಡಲಿದೆ. ಶೇ. 4.71 ರಷ್ಟು ತೆರಿಗೆ 14ನೇ ಆಯೋಗದಲ್ಲಿ ಬಂದರೆ, 15 ನೇ ಆಯೋಗದಲ್ಲಿ ಶೇ.3.65 ರಷ್ಟು ತೆರಿಗೆ ಬಂತು. ಎರಡು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದಲ್ಲಿ ಶೇ.1.06 ರಷ್ಟು ಕಡಿಮೆ ಬಂದಿದ್ದು, ನಮಗೆ ಅನ್ಯಾಯವಾಗಿದೆ. 15 ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5,495 ಕೋಟಿ ವಿಶೇಷ ಅನುದಾನವನ್ನು ಕರ್ನಾಟಕಕ್ಕೆ ನೀಡಲು ಶಿಫಾರಸು ಮಾಡಿತ್ತು. ಇಷ್ಟು ಹಣ ಪಡೆದುಕೊಳ್ಳಲು ರಾಜ್ಯ ಅರ್ಹವಾಗಿತ್ತು.
ಆದರೆ, ಹಣಕಾಸು ಸಚಿವರು ಕೊಡಲಾಗಲ್ಲ ಎಂದು ಅಂತಿಮ ವರದಿಯಲ್ಲಿ ಸೇರಿಸದಂತೆ ಸೂಚಿಸಿದರು. ಆ ಕಾರಣಕ್ಕೆ ವಿಶೇಷ ಅನುದಾನ ರದ್ದಾಯಿತು. ರಾಜ್ಯ ಸರ್ಕಾರಕ್ಕೆ ಆಗ ಅನೇಕ ಬಾರಿ ಹೇಳಿದ್ದೆ, ಒತ್ತಾಯ ಮಾಡಿ ಪಡೆಯಿರಿ ಎಂದರೆ ಪತ್ರ ಬರೆಯುತ್ತೇವೆ. ಕೇಳುತ್ತೇವೆ ಎಂದು ಕೈಚಲ್ಲಿದರು. ಹಾಗಾಗಿ ನಮಗೆ ಆ ಹಣ ಬರಲಿಲ್ಲ. ಆದರೆ, ಈಗ ನಾವು 16 ನೇ ಹಣಕಾಸು ಆಯೋಗದ ರಚನೆ ವೇಳೆ ನಾವು ನಮ್ಮ ರಾಜ್ಯದ ಸ್ಪಷ್ಟ ನಿಲುವನ್ನು ತಿಳಿಸುತ್ತೇವೆ. ರಾಜ್ಯಕ್ಕೆ ಅನ್ಯಾಯವಾಗದಂತೆ ಮುನ್ನೆಚ್ಚರಿಕೆ ವಹಿಸಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
2018-19 ರಲ್ಲಿ 33094 ಕೋಟಿ ತೆರಿಗೆ ಇತ್ತು. 2023-24 ಕ್ಕೆ 34952 ಕೋಟಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಆದರೇ ಕೇಂದ್ರ ನಮಗೆ ನ್ಯಾಯವಾಗಿ ಕೊಡಬೇಕಾದ ಪಾಲು ಕೊಡುತ್ತಿಲ್ಲ. 14 ನೇ ಆಯೋಗದಲ್ಲಿ ಬಂದಿರುವುದಕ್ಕಿಂತ 15 ರಲ್ಲಿ ಕಡಿಮೆಯಾಗಿದೆ. ಕೇಂದ್ರದ ಮೇಲೆ ನಾನು ಆರೋಪ ಮಾಡಿದರೆ ಬಿಜೆಪಿಯವರಿಗೆ ಕೋಪ ಬರಲಿದೆ. 5 ಸಾವಿರ ಕೋಟಿ ಯಾಕೆ ಪಡೆಯಲಿಲ್ಲ. ಇದು ರಾಜಕಾರಣ ಮಾಡುವ ವಿಷಯ ಅಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಪಡೆಯಲು ಬಿಜೆಪಿಯವರು ವಿಫಲರಾದರು. ಇದು ವಾಸ್ತವ ಎಂದು ಸಿದ್ದರಾಮಯ್ಯ ಬಿಜೆಪಿಯನ್ನು ಕುಟುಕಿದರು.
ಸೆಸ್ ಅಂಡ್ ಸರ್ಜಾರ್ಚ್ ಪಾಲು ನಮಗೆ ಕೊಡಲ್ಲ. ಆದಾಯ ತೆರಿಗೆ ಇತ್ಯಾದಿ ತೆರಿಗೆಯಲ್ಲಿ ನಮಗೆ ಪಾಲು ಕೊಡಬೇಕು. ಹಾಗಾಗಿ ಸೆಸ್, ಸರ್ ಜಾರ್ಜ್ ಹಾಕುತ್ತಿದ್ದಾರೆ. ತೆರಿಗೆ ಪಾಲು ವಿಷಯದಲ್ಲಿ ಕೇಂದ್ರ ಮಲತಾಯಿ ಧೋರಣೆ ತಳೆಯುತ್ತಿದೆ. ನಾವು ಉತ್ತಮ ಸ್ಥಿತಿಯಲ್ಲಿರುವ ಕಾರಣಕ್ಕೆ ಈ ಶಿಕ್ಷೆ, ರಾಜ್ಯಕ್ಕೆ ಅನ್ಯಾಯವಾಗಲು ಯಾವ ಪಕ್ಷವೂ ಬಿಡಬಾರದು. ಹಣಕಾಸು ಸಚಿವರು ರಾಜ್ಯದಿಂದ ಆಯ್ಕೆಯಾದರೂ ಅಂತಿಮ ವರದಿಯಲ್ಲಿ ಅನುದಾನ ಸೇರಿಸಬೇಡಿ ಎಂದರು. ಹಾಗಾಗಿ 5 ಸಾವಿರ ಕೋಟಿ ನಮ್ಮ ಕೈ ತಪ್ಪಿದೆ. ಈಗ 16 ನೇ ಹಣಕಾಸು ಆಯೋಗ ರಚನೆ ವೇಳೆ ನಾವು ಸಮರ್ಥವಾಗಿ ಕೆಲಸ ಮಾಡಲಿದ್ದೇವೆ. ನಮಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಿಎಂ ಭರವಸೆ ನೀಡಿದರು.