ಬೆಂಗಳೂರು : ಹೊಸದಾಗಿ ರಚನೆಯಾದ 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆರ್ಥಿಕ ನ್ಯಾಯ ಸಿಗುವ ನಿಟ್ಟಿನಲ್ಲಿ ಸಮರ್ಥ ವಾದ ಮಂಡನೆಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕಾಗಿ ಮೂರು ಸದಸ್ಯರ ತಾಂತ್ರಿಕ ಕೋಶವನ್ನು ರಚಿಸಲು ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, 16ನೇ ಹಣಕಾಸು ಆಯೋಗಕ್ಕೆ ಜ್ಞಾಪನಾ ಪತ್ರವನ್ನು (Memorandum) ತಯಾರಿಸಲು 3 ಸದಸ್ಯರುಗಳನ್ನೊಳಗೊಂಡ ತಾಂತ್ರಿಕ ಕೋಶವನ್ನು ರಚಿಸಲು ನಿರ್ಧರಿಸಲಾಗಿದೆ. 14ನೇ ಹಣಕಾಸು ಆಯೋಗ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬರಬೇಕಾದ ಅರ್ಥಿಕ ಅನುಕೂಲ, ಅನುದಾನಗಳು ನಮ್ಮ ರಾಜ್ಯದ ನೈತಿಕ ಹಕ್ಕಿಗೆ ವ್ಯತಿರಿಕ್ತವಾದ ಪರಿಣಾಮ ಬೀರಿದ್ದು, ಅದರಿಂದ ನಮಗೆ ದೊಡ್ಡ ಆರ್ಥಿಕ ಹೊರೆ ಬಿದ್ದಿದೆ. ಇದೀಗ 16ನೇ ಹಣಕಾಸು ಆಯೋಗ ರಚನೆ ಮಾಡಲಾಗಿದೆ. 16ನೇ ಹಣಕಾಸು ಆಯೋಗದಲ್ಲಿ ನಮ್ಮ ವಾದ ಏನಿರಬೇಕು ಎಂಬ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದಿದೆ. ರಾಜ್ಯ ಸಮರ್ಥವಾದ ವಾದ ಮಂಡನೆಗೆ ತೀರ್ಮಾನಿಸಲಾಗಿದ್ದು, ಇದಕ್ಕಾಗಿ ತಾಂತ್ರಿಕ ಕೋಶವನ್ನು ರಚಿಸಲು ನಿರ್ಧರಿಸಲಾಗಿದೆ. ತಾಂತ್ರಿಕ ಕೋಶದಲ್ಲಿ ಸದಸ್ಯರಾಗಿ ಗೋವಿಂದ ರಾವ್, ಶ್ರೀನಿವಾಸಮೂರ್ತಿ, ನರೇಂದ್ರ ಪಾಣಿ ಇರಲಿದ್ದಾರೆ ಎಂದರು.
ದೇಶದಲ್ಲಿ ಎರಡನೇ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕ. ಸುಮಾರು 4 ಲಕ್ಷ ಕೋಟಿ ಹಣ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತಿದೆ. ಇದರಲ್ಲಿ ಕೇವಲ 60 ಸಾವಿರ ಕೋಟಿ ರೂ. ನಮಗೆ ವಾಪಸ್ ಬರುತ್ತಿದೆ. ಐಟಿ ರಪ್ತು ಕ್ಷೇತ್ರದಲ್ಲಿ 3.50 ಲಕ್ಷ ಕೋಟಿ ರಾಜ್ಯದಿಂದ ರಪ್ತಾಗುತ್ತಿದೆ. ಅದಕ್ಕೆ ಪ್ರತಿಯಾಗಿ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬ ಅಭಿಪ್ರಾಯವಿದೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವ ತೆರಿಗೆ 4.71% ಪಾಲು ಇತ್ತು. 15ನೇ ಹಣಕಾಸು ಆಯೋಗದ ವೇಳೆ ಅದು 3.64% ಕ್ಕೆ ಇಳಿಕೆಯಾಗಿದೆ. ತೆರಿಗೆ ಪಾಲಿನಲ್ಲಿ 25% ಕಡಿಮೆಯಾಗಿದೆ. ಆ ಮೂಲಕ ವರ್ಷಕ್ಕೆ 14 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. 2020-2025ವರೆಗೆ ಐದು ವರ್ಷದಲ್ಲಿ 62,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.
ಕೇಂದ್ರ ತೆರಿಗೆಗಳನ್ನು ಮುಂದುವರಿಸಿದೆ. ಪ್ರಮಾಣವೂ ಅಷ್ಟೇ ಇದೆ. ಆದರೆ, ತೆರಿಗೆಯನ್ನು ಕರವಾಗಿ ಪರಿವರ್ತಿಸಿದೆ. ಈ ಮುಂಚೆ ಸೆಸ್ನಿಂದ ಕೇಂದ್ರಕ್ಕೆ ಹೋಗುವ ಆದಾಯ 8-9% ಇತ್ತು. ಇದೀಗ ಕರದಿಂದ 23% ಕೇಂದ್ರ ಸರ್ಕಾರಕ್ಕೆ ಆದಾಯ ಬರುತ್ತಿದೆ. ಸೆಸ್ಗೆ ಪರಿವರ್ತಿಸಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಸಂಗ್ರಹದಲ್ಲಿ ಸುಮಾರು 90% ಕೇಂದ್ರವೇ ಇಟ್ಟು ಕೊಳ್ಳುತ್ತಿದೆ. ರಾಜ್ಯಕ್ಕೆ ಕೇವಲ 5% ಮಾತ್ರ ಬರುತ್ತಿದೆ. ಇದರಿಂದ ಕರ್ನಾಟಕ ರಾಜ್ಯಕ್ಕೆ ವರ್ಷಕ್ಕೆ 8,200 ಕೋಟಿ ರೂ.ನಷ್ಟವಾಗುತ್ತಿದೆ. ತೆರಿಗೆಯನ್ನು ಕರವಾಗಿ ಪರಿವರ್ತನೆ ಮಾಡಿರುವುದರಿಂದ ಈ ಕೊರತೆಯಾಗಿದೆ ಎಂದರು.