ಕರ್ನಾಟಕ

karnataka

ETV Bharat / state

ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಹಾಕಿ ₹16 ಕೋಟಿ ವಂಚನೆ: ಓರ್ವನ ಬಂಧನ - ಬಿಎಂಟಿಸಿ ಹಿರಿಯ ಅಧಿಕಾರಿ

ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಹಾಕಿ 16 ಕೋಟಿ ರುಪಾಯಿ ವಂಚನೆ ಮಾಡಿದ ಆರು ಮಂದಿ ಆರೋಪಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ.

DCP Shekhar T.H
ಡಿಸಿಪಿ ಶೇಖರ್ ಟಿ.ಹೆಚ್

By ETV Bharat Karnataka Team

Published : Oct 4, 2023, 12:42 PM IST

ಆರೋಪಿ ಬಂಧನದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟಿ.ಹೆಚ್

ಬೆಂಗಳೂರು : ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ 16 ಕೋಟಿ ರೂಪಾಯಿ ವಂಚಿಸಿದ್ದ ಆರೋಪದಡಿ ಶಾಂತಿನಗರದ ಬಿಎಂಟಿಸಿ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಎಂಟಿಸಿಯ ಅಂದಿನ ಸಂಚಾರ ಮುಖ್ಯ ವ್ಯವಸ್ಥಾಪಕರಾಗಿದ್ದ ಶ್ರೀರಾಮ್ ಮುಲ್ಕವಾನ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿತ ಅಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟಿ.ಹೆಚ್ ತಿಳಿಸಿದ್ದಾರೆ.

2020 ರಿಂದ 2023ರ ವರೆಗೆ ನಡೆದ ಅವ್ಯವಹಾರ ಇದಾಗಿದೆ. ಬಿಎಂಟಿಸಿ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಅಧಿಕಾರಿಗಳು ಬಿಎಂಟಿಸಿ ಭದ್ರತೆ ಹಾಗೂ ಜಾಗೃತದಳ ನಿರ್ದೇಶಕ ಅರುಣ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶಿಖಾ ಅವರ ಹೆಸರಿನಲ್ಲಿ ಸಹಿ ಇರುವ ಕಡತವನ್ನು ಕಲರ್ ಜೆರಾಕ್ಸ್ ಮಾಡಿ ಅದರಲ್ಲಿ ನಕಲಿ ಸಹಿ ಹಾಕಿ ಸುಮಾರು 16 ಕೋಟಿವರೆಗೂ ವಂಚಿಸಿರುವುದಾಗಿ ಆಪಾದಿಸಿ ಬಿಎಂಟಿಸಿಯ ವಿಚಕ್ಷಣಾ ದಳ‌ದ ಅಧಿಕಾರಿಗಳು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಕೊರೊನಾ ಲಾಕ್​ಡೌನ್ ವೇಳೆ ವಿನಾಯಿತಿ ನೀಡುವ ಸಂಬಂಧ ಪರವಾನಗಿ ಶುಲ್ಕ ಮನ್ನಾ ಮಾಡಬಹುದು ಎಂದು ಹೇಳಿ ಪತ್ರ ಬರೆದು ನಕಲಿ ಸಹಿ‌ ಮಾಡಿ 21 ಲಕ್ಷ ವಂಚಿಸಿದ್ದರು. ಅಲ್ಲದೆ, ಬಿಎಂಟಿಸಿ ಹಿರಿಯ ಅಧಿಕಾರಿಗಳು ಕಡತಗಳಿಗೆ ಅನುಮೋದಿಸಿದ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ಸಂಸ್ಥೆಗೆ 16 ಕೋಟಿವರೆಗೂ ವಂಚಿಸಿದ್ದರು. ಅವ್ಯವಹಾರ ಎಸಗಿರುವುದು ಗೊತ್ತಾಗುತ್ತಿದ್ದಂತೆ ಬಿಎಂಟಿಸಿ ಅಧಿಕಾರಿಗಳು ದೂರು ನೀಡಿದ ಮೇರೆಗೆ ಆರೋಪಿಯನ್ನ ಬಂಧಿಸಲಾಗಿದೆ. ವಂಚನೆ ಪ್ರಕರಣದಲ್ಲಿ ಇನ್ನು ಆರು ಮಂದಿ ಭಾಗಿಯಾಗಿದ್ದು, ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಡಿಸಿಪಿ ತಿಳಿಸಿದರು.

ಇದನ್ನೂ ಓದಿ :ನಕಲಿ ಸಹಿ ಮಾಡಿ ರೈತರ ಹೆಸರಿನಲ್ಲಿ ಮೋಸ ಆರೋಪ : ಸಹಕಾರ ಸಂಘದ ಕಾರ್ಯದರ್ಶಿಗೆ ರೈತರಿಂದ ಗೂಸಾ

ಪ್ರತ್ಯೇಕ ಪ್ರಕರಣ.. ಕಳೆದ ವರ್ಷದ ಏಪ್ರಿಲ್​ ತಿಂಗಳಲ್ಲಿ ಆರೋಪಿಗಳಿಗೆ ಜಾಮೀನು ಕೊಡಿಸಲು ಸರ್ಕಾರಿ ಕಚೇರಿಯ ಸೀಲ್​ಗಳನ್ನು ನಕಲು ಮಾಡಿ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದ ಜಾಲವೊಂದನ್ನು ಬೆಂಗಳೂರು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪತ್ತೆ ಹಚ್ಚಿ ಓರ್ವ ಮಹಿಳೆ ಸೇರಿದಂತೆ 9 ಜನರನ್ನು ಬಂಧಿಸಿದ್ದರು. ಪುಟ್ಟಸ್ವಾಮಿ, ನಸ್ರೀನ್ ,ರಾಜಣ್ಣ, ಮಂಜುನಾಥ್, ಆಂಜಿನಪ್ಪ, ಕುಮಾರ್, ಚಂದ್ರಗೌಡ, ಸೊಣ್ಣೆಗೌಡ ಮತ್ತು ಟಿ.ಎಂ. ರಾಜಪ್ಪ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ನಕಲಿ ಸೀಲ್​ಗಳು, ನಕಲಿ ಆಧಾರ್ ಕಾರ್ಡ್, ನಕಲಿ ಪ್ರಮಾಣಪತ್ರ, ನಕಲಿ ಲೆಟರ್​ಗಳು, ನಕಲಿ ಪಹಣಿ ಪತ್ರಗಳು, ಕಂಪ್ಯೂಟರ್‌, ಪ್ರಿಂಟರ್, ಸ್ಕ್ಯಾನರ್, ಲ್ಯಾಮಿನೇಷನ್ ಮಷಿನ್ ಮತ್ತು ಆಟೋರಿಕ್ಷಾ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಇದನ್ನೂ ಓದಿ :ಜಾಮೀನು ಕೊಡಿಸಲು ಸರ್ಕಾರಿ ಸೀಲ್​ ಬಳಸಿ​ ನಕಲಿ ದಾಖಲೆ: ಬೆಂಗಳೂರಲ್ಲಿ ಗ್ಯಾಂಗ್​ ಅರೆಸ್ಟ್‌

ABOUT THE AUTHOR

...view details