ಬೆಂಗಳೂರು :ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕರ್ತವ್ಯ ನಿರತ ಅಧಿಕಾರಿ ಅಥವಾ ಸಿಬ್ಬಂದಿ ಮೃತಪಟ್ಟರೆ ಹಾಗೂ ಗಾಯಗೊಂಡರೆ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಚುನಾವಣಾ ಆಯೋಗ ನಡೆಸುವ ಚುನಾವಣೆ ಸಂದರ್ಭದಲ್ಲಿ ಕರ್ತವ್ಯದಲ್ಲಿರುವಾಗ ಗಾಯಗೊಂಡ ಅಥವಾ ನಿಧನರಾದರೆ, ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿಯವರ ಕುಟುಂಬದ ವಾರಸುದಾರರಿಗೆ ಪರಿಹಾರ ಸಿಗಲಿದೆ.ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಮೃತಪಟ್ಟರೆ 15 ಲಕ್ಷ ರೂ. ಪರಿಹಾರ ಧನ ನೀಡಲಾಗುತ್ತದೆ. ಉಗ್ರಗಾಮಿ ಹಿಂಸೆಯಿಂದ ಅಥವಾ ಸಮಾಜ ವಿರೋಧಿ ಕೃತ್ಯ , ಬಾಂಬ್ ಸ್ಫೋಟಿಸುವುದರಿಂದ ಅಥವಾ ಮಾರಕ ಆಯುಧಗಳಿಂದ ಹಲ್ಲೆಗೆ ಒಳಗಾಗಿ ನಿಧನರಾದರಲ್ಲಿ 30 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಆದೇಶಿಸಲಾಗಿದೆ.
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಶಾಶ್ವತವಾಗಿ ಅಂಗವಿಕಲರಾದಲ್ಲಿ 7.50 ಲಕ್ಷ ರೂ. ಪರಿಹಾರ ನೀಡಲಾಗುವುದು. ಆದರೆ, ಇಂತಹ ಅವಘಡಗಳು ಉಗ್ರಗಾಮಿಗಳ ಹಿಂಸೆಯಿಂದ ಅಥವಾ ಸಮಾಜ ವಿರೋಧಿ ಕೃತ್ಯಗಳಿಂದ ಸಂಭವಿಸಿದಲ್ಲಿ ದುಪ್ಪಟ್ಟು ಪರಿಹಾರಧನ ಅಂದರೆ 15 ಲಕ್ಷ ರೂ. ಪರಿಹಾರ ನೀಡಬಲಾಗುತ್ತದೆ.
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ನಿಧನ ಹೊಂದಿದ ಅಥವಾ ಹಲ್ಲೆಗೆ ಒಳಗಾಗಿರುವ ಪ್ರತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿ ಚುನಾವಣಾ ಕಾರ್ಯಕ್ಕೆ ಬಿಡುಗಡೆಯಾದ ಅನುದಾನದಿಂದಲೇ ಈ ವೆಚ್ಚ ಭರಿಸುವಂತೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಇದನ್ನು ಓದಿ:ಜಾರಕಿಹೊಳಿ ಸಿಡಿ ಕೇಸ್ : ಎಸ್ಐಟಿ ಮುಖ್ಯಸ್ಥರ ಗೈರಿನಲ್ಲಿ ತನಿಖೆಗೆ ಹೈಕೋರ್ಟ್ ಅಸಮಾಧಾನ