ಕರ್ನಾಟಕ

karnataka

ETV Bharat / state

15 ದಿನಗಳ ಸಾರಿಗೆ ಮುಷ್ಕರ ಅಂತ್ಯ.. ನಾಳೆಯಿಂದಲೇ ಎಲ್ಲಾ ನೌಕರರು ಕೆಲಸಕ್ಕೆ ಹಾಜರ್ - ಕೋಡಿಹಳ್ಳಿ ಚಂದ್ರಶೇಖರ್

ನಾಳೆಯಿಂದ ನೌಕರರು ಕೆಲಸಕ್ಕೆ ಹಾಜರಾಗಲು ಸೂಚಿಸಲಾಗುವುದು. ನಾಳೆಯಿಂದ 4 ನಿಗಮಗಳ ಬಸ್​​ಗಳು ಯಥಾಸ್ಥಿತಿ ಸಂಚರಿಸಲಿವೆ. ಈ ಅನಿರ್ದಿಷ್ಟಾವಧಿ ಮುಷ್ಕರ ಮುಂದೂಡಲಾಗಿದ್ದು, ನ್ಯಾಯಾಲಯದ ಆದೇಶ ಗೌರವಿಸಲಾಗುತ್ತದೆ..

15 ದಿನಗಳ ಸಾರಿಗೆ ಮುಷ್ಕರ ಅಂತ್ಯ
15 ದಿನಗಳ ಸಾರಿಗೆ ಮುಷ್ಕರ ಅಂತ್ಯ

By

Published : Apr 21, 2021, 7:00 PM IST

ಬೆಂಗಳೂರು :ರಾಜ್ಯದಲ್ಲಿ ಅಂತೂ ಸಾರಿಗೆ ನೌಕರರ 15 ದಿನಗಳ ಅನಿರ್ದಿಷ್ಟಾವಧಿ ಮುಷ್ಕರ ಇಂದು ಅಂತ್ಯವಾಗಿದೆ. ನಾಳೆಯಿಂದ 4 ನಿಗಮಗಳ ನೌಕರರು ಕೆಲಸಕ್ಕೆ ಹಾಜರಾಗಲಿದ್ದಾರೆ.‌ ಸರ್ಕಾರ-ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ನಿನ್ನೆ ಹೈಕೋರ್ಟ್ ಸೂಚನೆ ನೀಡಿದ ಮೇರೆಗೆ ಮುಷ್ಕರ ಮುಂದೂಡಲಾಗಿದೆ.

ಈ ಕುರಿತು ಇಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಹೈಕೋರ್ಟ್​ ಮಧ್ಯಪ್ರವೇಶ ಮಾಡಿದ್ದು, ನ್ಯಾಯಮೂರ್ತಿಗಳು ಹೇಳಿದ್ದನ್ನ ಗೌರವಿಸ್ತೀವಿ. ಅವರು ಸೇವೆಗೆ ಹಾಜರಾಗುವಂತೆ ಸೂಚಿಸಿದಾರೆ. ಹೀಗಾಗಿ, ಮುಷ್ಕರ ಕೈಬಿಟ್ಟಿದ್ದೇವೆ.

ನಾಳೆಯಿಂದ ನೌಕರರು ಕೆಲಸಕ್ಕೆ ಹಾಜರಾಗಲು ಸೂಚಿಸಲಾಗುವುದು. ನಾಳೆಯಿಂದ 4 ನಿಗಮಗಳ ಬಸ್​​ಗಳು ಯಥಾಸ್ಥಿತಿ ಸಂಚರಿಸಲಿವೆ. ಈ ಅನಿರ್ದಿಷ್ಟಾವಧಿ ಮುಷ್ಕರ ಮುಂದೂಡಲಾಗಿದ್ದು, ನ್ಯಾಯಾಲಯದ ಆದೇಶ ಗೌರವಿಸಲಾಗುತ್ತದೆ ಎಂದಿದ್ದಾರೆ.

ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರಿಗೆ ಶಾಕ್ :ಸರ್ಕಾರದ ಮಾತಿಗೂ ಕ್ಯಾರೇ ಅನ್ನದೇ 6ನೇ ವೇತನಕ್ಕೆ ಪಟ್ಟು ಹಿಡಿದಿದ್ದ ಸಾರಿಗೆ ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ, ಮುಷ್ಕರದಲ್ಲಿ ಪಾಲ್ಗೊಂಡಿದ್ದ ನೌಕರರಿಗೆ ಅಮಾನತು ಹಾಗೂ ವಜಾ ಮಾಡುವ ಅಸ್ತ್ರ ಬಳಕೆ ಮಾಡಿದ್ದರು.

ಬಿಎಂಟಿಸಿಯ 3,170 ಸಿಬ್ಬಂದಿ ಅಮಾನತು ಹಾಗೂ 1,209 ಸಿಬ್ಬಂದಿಯ ವಜಾ ಮಾಡಲಾಗಿದೆ. ಕೆಎಸ್​​ಆರ್​ಟಿಸಿಯಲ್ಲಿ 351 ಸಿಬ್ಬಂದಿಯನ್ನ ವಜಾ ಮಾಡಲಾಗಿದೆ. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸಾರ್ವಜನಿಕರಿಗೆ ಅನಾನೂಕೂಲವಾಗದೇ ಇರಲಿ ಎಂಬ ಕಾರಣಕ್ಕೆ ಸರ್ಕಾರ ಖಾಸಗಿ ಬಸ್​​​ಗಳ ಮೊರೆ ಹೋಗಿತ್ತು. ಆದರೆ, ಪ್ರಯಾಣಿಕರ ಪರದಾಟ ಮಾತ್ರ ತಪ್ಪಲಿಲ್ಲ, ಅನ್ಯ ಜಿಲ್ಲೆಗಳಿಗೆ ಬಸ್​ಗಳ ವ್ಯವಸ್ಥೆ ಸಿಕ್ಕರೂ, ನಗರದೊಳಗೆ ಬಸ್​​​ ಸಂಚಾರವಿಲ್ಲದೇ ಸಂಕಷ್ಟ ಅನುಭವಿಸಬೇಕಾಯಿತು.

ಬಸ್​ಗಳಿಗೆ ಹಾನಿ :ಸಾರಿಗೆ ನೌಕರರು ಶಾಂತಿಯುತ ಮುಷ್ಕರ ನಡೆಸಿದ್ದರೂ ಸಹ ಹಲವು ಭಾಗಗಳಲ್ಲಿ ಬಸ್​​ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆಯಿತು. ಇದರಿಂದ 15 ದಿನಗಳಲ್ಲಿ 4 ನಿಗಮಗಳ 115 ಬಸ್​​ಗಳು ಜಖಂ ಆಗಿವೆ.

  • ಕೆಎಸ್​ಆರ್​ಟಿಸಿ -73 ಬಸ್​ಗಳು
  • ಬಿಎಂಟಿಸಿ- 6 ಬಸ್​​ಗಳು
  • ಎಸ್​​ಇಕೆಆರ್​ಟಿಸಿ- 23 ಬಸ್​​​ಗಳು
  • ಎನ್​​​​ಡಬ್ಲ್ಯೂಕೆಆರ್​ಟಿಸಿ-13 ಬಸ್​​ಗಳು

ಬಸ್​​​​ಗಳಿಗೆ ಹಾನಿ, ನೌಕರರಿಗೆ ಬೆದರಿಕೆ ಹಾಕಿದ ಪರಿಣಾಮ 212 ಎಫ್​ಐಆರ್ ದಾಖಲಾಗಿವೆ. ಇದರಲ್ಲಿ 516 ಸಿಬ್ಬಂದಿ ಭಾಗಿಯಾಗಿದ್ದಾರೆ. ಪ್ರಕರಣ ಸಂಬಂಧ 146 ಜನರನ್ನ ಬಂಧಿಸಲಾಗಿದೆ.

ಇಂದು ಸಂಜೆಯಿಂದ ರಸ್ತೆಗಿಳಿದ ಸಾವಿರಾರು ಬಸ್​​ಗಳು

  • ಕೆಎಸ್​​​ಆರ್​​​ಟಿಸಿ- 4,808
  • ಬಿಎಂಟಿಸಿ- 2,808
  • ಎನ್ಇಕೆಆರ್​​ಟಿಸಿ-2,134
  • ಎನ್​​​​ಡಬ್ಲ್ಯೂಕೆಆರ್​ಟಿಸಿ- 2,942

ಒಟ್ಟಾರೆ, 4 ನಿಗಮಗಳಿಂದ 12,692 ಬಸ್​ಗಳು ಇಂದು ರಸ್ತೆಗಿಳಿದಿವೆ.

ABOUT THE AUTHOR

...view details