ದೇವನಹಳ್ಳಿ:ಮೇ. 24, 2008 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ವಿಮಾನ ಯಾನ ಸೇವೆ ಪ್ರಾರಂಭವಾಗಿತ್ತು. ದಕ್ಷಿಣ ಭಾರತದ ಪ್ರಮುಖ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕೆಐಎಎಲ್ಗೆ ಇದೀಗ 14ನೇ ವಾರ್ಷಿಕೋತ್ಸವದ ಸಂಭ್ರಮ. ಸಿಲಿಕಾನ್ ಸಿಟಿ ಎಂದು ಖ್ಯಾತಿಗಳಿಸಿರುವ ಬೆಂಗಳೂರು ನಗರಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆ ಅಗತ್ಯವಾಗಿತ್ತು.
ಪ್ರಪಂಚದ ಮೂಲೆ ಮೂಲೆಗೂ ಇಲ್ಲಿಂದಲೇ ಸಂಪರ್ಕ ಸಾಧಿಸಬೇಕೆನ್ನುವ ಕಾರಣಕ್ಕೆ ದೇವನಹಳ್ಳಿ ಬಳಿ 2005ರ ಜುಲೈ ತಿಂಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಮೇ. 24, 2008 ರಂದು ಕೆಐಎಎಲ್ ನಿಂದ ನಾಗರಿಕ ವಿಮಾನಯಾನ ಸೇವೆ ಪ್ರಾರಂಭವಾಗಿತ್ತು. ಬೆಂಗಳೂರು ಬೆಳೆದ ವೇಗದಲ್ಲಿ ಕೆಐಎಎಲ್ ಸಹ ಬೆಳದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ದಕ್ಷಿಣ ಭಾರತದ ಹೆಬ್ಬಾಗಿಲು ಆಗಿದೆ.