ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜನರ ದಾಹ ತಣಿಸಲು ಕಾವೇರಿ ಕೊಳ್ಳದಿಂದ ಪ್ರತಿ ದಿನ 1,450 ದಶಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ಕಿಲೋ ಲೀಟರ್ ನೀರಿಗೆ 41 ರೂ. ವ್ಯಯ ಮಾಡಲಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಶೇ 29 ರಷ್ಟು ನೀರು ಪೋಲಾಗುತ್ತಿದ್ದು ಅದನ್ನು ತಡೆಯಲು ವಿಚಕ್ಷಣ ದಳ ರಚಿಸಲು ಸರ್ಕಾರ ಮುಂದಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ಗೆ ಉತ್ತರ ನೀಡಿದರು.
ಕಾವೇರಿ ಮೊದಲ ಹಂತದಲ್ಲಿ 135 ದಶಲಕ್ಷ ಲೀಟರ್, ಎರಡನೇ ಹಂತದಲ್ಲಿ 140 ದಶಲಕ್ಷ ಲೀಟರ್, ಮೂರನೇ ಹಂತದಲ್ಲಿ 325 ದಶಲಕ್ಷ ಲೀಟರ್, ನಾಲ್ಕನೇ ಹಂತ ಒಂದನೇ ಘಟ್ಟದಲ್ಲಿ 300 ದಶಲಕ್ಷ ಲೀಟರ್, ನಾಲ್ಕನೇ ಹಂತ ಎರಡನೇ ಘಟ್ಟದಲ್ಲಿ 550 ದಶಲಕ್ಷ ಲೀಟರ್ ಸೇರಿ ಒಟ್ಟು 1450 ದಶಲಕ್ಷ ಲೀಟರ್ ನೀರನ್ನು ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.ಕಾವೇರಿ ನೀರಿನ ಸಂಗ್ರಹಣೆಯ ಸರಬರಾಜಿಗೂ ಮುನ್ನ ಜಲ ಶುದ್ದೀಕರಣ ಘಟಕದಲ್ಲಿ ರಾಸಾಯನಿಕ ಬಳಕೆ, ವಿದ್ಯುತ್ ಶುಲ್ಕ, ಬಂಡವಾಳ ವೆಚ್ಚ ಹಾಗೂ ನೌಕರರ ವೇತನ ಇತರ ವೆಚ್ಚ ಸೇರಿ ಒಂದು ಕಿಲೋ ಲೀಟರ್ ಗೆ ತಗುಲುವ ವೆಚ್ಚ 41 ರೂ. ಆಗುತ್ತಿದೆ. ಬೆಂಗಳೂರು ಜಲಮಂಡಳಿ ವತಿಯಿಂದ 10.64 ಲಕ್ಷ ಸಂಪರ್ಕಗಳಿಂದ ಪ್ರತಿದಿನ ಸುಮಾರು 3.83 ಕೋಟಿ ರೂ ಬೆಂಗಳೂರು ಜಲಮಂಡಳಿಗೆ ಸಂದಾಯವಾಗುತ್ತಿದೆ ಎಂದು ಮಾಹಿತಿ ನೀಡಿದರು.