ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ನಿರ್ಧರಿಸಿದ್ದ ರಾಜ್ಯ ಸರ್ಕಾರ ತೀವ್ರ ಟೀಕೆ ಎದುರಿಸಿದ ನಂತರ ಈ ತೀರ್ಮಾನ ಕೈಬಿಟ್ಟಿತ್ತು. ಇದೀಗ ನೂತನ ವರ್ಷಾಚರಣೆಯ ಜವಾಬ್ದಾರಿ ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಉದ್ಯಾನ ನಗರಿಯ ಪೊಲೀಸರು ಸರ್ವ ಸಜ್ಜಾಗಿದ್ದಾರೆ.
ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ:
ನೂತನ ವರ್ಷ 2021ನ್ನು ಸ್ವಾಗತಿಸಲು ಮೂರು ದಿನಗಳಷ್ಟೇ ಉಳಿದಿವೆ. ಅಂದು ಅದ್ಧೂರಿಯಾಗಿ ಹೊಸ ವರ್ಷಾಚರಣೆಗೆ ಪ್ಲಾನ್ ಮಾಡಿರುವವರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶಾಕ್ ಕೊಟ್ಟಿದ್ದಾರೆ. ಡಿ.31ರ ಸಂಜೆ 6ರಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳನ್ನು ಕಮಲ್ ಪಂತ್ ಬಿಡುಗಡೆ ಮಾಡಿದರು.
ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಇಲ್ಲ:
ಐದು ಅಥವಾ ಅದಕ್ಕಿಂತ ಹೆಚ್ಚು ಜನ ಒಂದೆಡೆ ಒಟ್ಟಾಗಿ ಸೇರುವಂತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಅದ್ಧೂರಿ ಆಚರಣೆಗೆ ಅವಕಾಶವಿಲ್ಲ. ಈ ನಿಯಮಗಳನ್ನು ಪಾಲಿಸದಿದ್ದರೆ ಪ್ರತ್ಯೇಕ ದಂಡ ವಿಧಿಸಲಾಗುವುದು. ಅಪಾರ್ಟ್ಮೆಂಟ್ಗಳು, ಕ್ಲಬ್ಹೌಸ್ನಲ್ಲಿ ಆಚರಣೆ ಮಾಡಬಹುದು. ಆದರೆ ಪಬ್, ರೆಸ್ಟೋರೆಂಟ್ಗಳಲ್ಲಿ ಕೋವಿಡ್ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪಬ್, ಬಾರ್, ರೆಸ್ಟೋರೆಂಟ್ಗಳು ಎಂದಿನಂತೆ ಕಾರ್ಯನಿರ್ವಹಿಸಬಹುದು. ಪಬ್, ಕ್ಲಬ್ಹೌಸ್ಗಳಲ್ಲಿ ಈವೆಂಟ್ ಶೋ, ಸಂಗೀತ ಬ್ಯಾಂಡ್, ಮ್ಯೂಸಿಕ್ ಡ್ಯಾನ್ಸ್ ಮಾಡುವ ಹಾಗಿಲ್ಲ.