ಆನೇಕಲ್: ದಶಕಕ್ಕೂ ಹೆಚ್ಚು ಕಾಲ ಬಂಧಿಯಾಗಿದ್ದ, ಹೊರ ಜಗತ್ತಿಗೆ ಮರೆಯಾಗಿ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ಕೈದಿಗಳಿಗೆ ಬಿಡುಗಡೆಯ ಭಾಗ್ಯ ದೊರಕಿದೆ.
ಸನ್ನಡತೆ ತೋರಿದ 141 ಕೈದಿಗಳಿಗೆ ಬಿಡುಗಡೆ ಭಾಗ್ಯ ರಾಜ್ಯದ 7 ಕಾರಾಗೃಹಗಳಲ್ಲಿದ್ದ ಶಿಕ್ಷೆ ಅನುಭವಿಸಿ ಜೈಲಿನಲ್ಲಿ ಸನ್ನಡತೆ, ಸಂಯಮ ತೋರಿದ ಕೈದಿಗಳಿಗೆ ಶಿಕ್ಷೆಯಲ್ಲಿ ವಿನಾಯಿತಿ ತೋರಿ ಬಿಡುಗಡೆಗೊಳಿಸಲಾಗಿದೆ. ರಾಜ್ಯಾದ್ಯಂತ ಇರುವ ಸನ್ನಡತೆ ತೋರಿದ 141 ಕೈದಿಗಳನ್ನು ರಾಜ್ಯಪಾಲರ ಅಂಕಿತದೊಂದಿಗೆ ಜೈಲಿನ ಮೇಲಾಧಿಕಾರಿಗಳು ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಪರಪ್ಪನ ಅಗ್ರಹಾರದಲ್ಲಿ ಕೇಂದ್ರ ಕಾರಾಗೃಹ ಇಲಾಖೆಯಿಂದ ನಡೆದ ಸಮಾರಂಭದಲ್ಲಿ ಕೈದಿಗಳಿಗೆ ಬಿಡುಗಡೆ ಪತ್ರ ವಿತರಿಸಲಾಯಿತು.
ಬೆಂಗಳೂರಿನಲ್ಲಿ 71 ಕೈದಿಗಳಿಗೆ ಬಿಡುಗಡೆ ಪತ್ರ ನೀಡಲಾಯಿತು. ಇನ್ನು ಜೈಲುಗಳನ್ನು ಉನ್ನತ ದರ್ಜೆಗೇರಿಸಲಾಗುತ್ತಿದ್ದು, ಕೈದಿಗಳಿಗೆ ಶಿಕ್ಷೆ ಅವಧಿ ಮುಗಿದ ನಂತರದ ಜೀವನ ನಡೆಸಲು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದ್ದು, ಬಿಡುಗಡೆ ನಂತರ ಉತ್ತಮ ಜೀವನ ರೂಪಿಸಿಕೊಳ್ಳಲು ಈ ಕ್ರಮವನ್ನು ರಾಜ್ಯಸರ್ಕಾರ ಜೈಲುಗಳಲ್ಲಿ ಆಳವಡಿಸಿದೆ. ಇನ್ನು, ಔರಾದ್ಕರ್ ವರದಿಯಲ್ಲಿ ಅಗ್ನಿಶಾಮಕ ಹಾಗೂ ಜೈಲು ಸಿಬ್ಬಂದಿ ವೇತನ ಹೆಚ್ಚಳದ ಬಗ್ಗೆ ಉಲ್ಲೇಖಿಸಿರಲಿಲ್ಲ. ಇದೀಗ ಸಚಿವ ಸಂಪುಟದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 71 ಜನರನ್ನು ಬಿಡುಗಡೆ ಮಾಡಲಾಗಿದ್ದು, ಬಿಡುಗಡೆ ಹೊಂದಿದ ಕೈದಿಗಳು ಸಂತಸದಿಂದ ಮನೆಗಳಿಗೆ ತೆರಳಿದ್ದಾರೆ. ಕೈದಿಗಳಿಗೆ ಕಾರಾಗೃಹದ ಅಧಿಕಾರಿಗಕು ಹೂಗುಚ್ಛ ನೀಡುವ ಮೂಲಕ ಬೀಳ್ಕೊಟ್ಟರು.