ಕರ್ನಾಟಕ

karnataka

ETV Bharat / state

ವೃಷಭಾವತಿ ನದಿ ಜಲಾನಯನ ಪ್ರದೇಶದಲ್ಲಿ 14 ಒತ್ತುವರಿ ತೆರವು: ಹೈಕೋರ್ಟ್​ಗೆ ಮಾಹಿತಿ - ಮುಖ್ಯ ಎಂಜಿನಿಯರ್ ಎಂ ಲೋಕೇಶ್

ಬಿಬಿಎಂಪಿಯ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಎಂ ಲೋಕೇಶ್ ದಾಖಲೆಗಳೊಂದಿಗೆ ಸಲ್ಲಿಸಿದ ಅನುಪಾಲನಾ ವರದಿಯನ್ನು ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ಮೂರು ವಾರ ಮುಂದೂಡಿದೆ.

Highcourt
ಹೈಕೋರ್ಟ್​

By

Published : Oct 20, 2022, 10:10 PM IST

ಬೆಂಗಳೂರು:ನಗರದ ವೃಷಭಾವತಿ ನದಿ ಜಲಾನಯನ ಪ್ರದೇಶದ ಒಟ್ಟು 14 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ತ್ಯಾಜ್ಯ ಹಾಗೂ ರಾಸಾಯನಿಕ ಸೇರ್ಪಡೆಯಿಂದ ಮಲಿನಗೊಂಡಿರುವ ವೃಷಭಾವತಿ ನದಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ನಗರದ ವಕೀಲೆ ಗೀತಾ ಮಿಶ್ರಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಹಾಜರಾಗಿ, ಬಿಬಿಎಂಪಿಯ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಎಂ ಲೋಕೇಶ್ ಅನುಪಾಲನಾ ವರದಿಯನ್ನು ದಾಖಲೆಗಳೊಂದಿಗೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ಮೂರು ವಾರ ಮುಂದೂಡಿತು.

ಹೈಕೋರ್ಟ್ ನಿರ್ದೇಶನದಂತೆೆ ವೃಷಭಾವತಿ ನದಿ ಜಲಾನಯನ ಪ್ರದೇಶದ ಸರ್ವೇ ನಡೆಸಲಾಗಿದೆ. ಸರ್ವೇ ಇಲಾಖೆಯ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ಒತ್ತುವರಿ ಪ್ರದೇಶಗಳಲ್ಲಿದ್ದ ಹಲವು ಒತ್ತುವರಿದಾರರಿಗೆ ನೋಟಿಸ್ ನೀಡಿ, ಒತ್ತುವರಿ ತೆರವುಗೊಳಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಅವಧಿ ಮೀರಿದರೂ ತೆರವು ಮಾಡದ ಹಿನ್ನೆಲೆಯಲ್ಲಿ (ಆರ್‌ಆರ್ ನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ) ಸೆ.3 ಹಾಗೂ ಸೆ.15ರಂದು ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಲಾಗಿದೆ. ಈವರೆಗೆ ಒಟ್ಟು 14 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಅನುಪಾಲನಾ ವರದಿಯಲ್ಲಿ ಹೇಳಲಾಗಿದೆ.

ಬಾಕಿ ಒತ್ತುವರಿಗಳ ತೆರವಿಗಾಗಿ ಭೂದಾಖಲೆಗಳ ಉಪ ನಿರ್ದೇಶಕರಿಗೆ (ಡಿಡಿಎಲ್‌ಆರ್) ಸೆ.13ರಂದು ಪತ್ರ ಬರೆದಿರುವ ಬಿಬಿಎಂಪಿ, ನದಿ ಪ್ರದೇಶದಲ್ಲಾಗಿರುವ ಒತ್ತುವರಿಗಳನ್ನು ತೋರಿಸುವ ನಕ್ಷೆ ಒದಗಿಸುವಂತೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲೇ ಒತ್ತುವರಿಯಾಗಿರುವ ಭಾಗಗಳನ್ನು ಭೌತಿಕವಾಗಿ ಗುರುತಿಸುವಂತೆ ಕೋರಿದೆ.

ಆ ಪತ್ರ ಆಧರಿಸಿ ಜಿಲ್ಲಾಧಿಕಾರಿಗಳು ಸೆ.21ರಂದು ಉತ್ತರ/ದಕ್ಷಿಣ ತಾಲೂಕಿನ ತಹಸೀಲ್ದಾರ್‌ಗೆ ಪತ್ರ ಬರೆದಿದ್ದು, ಬಿಬಿಎಂಪಿ ಕೋರಿರುವ ನಕ್ಷೆ ಒದಗಿಸುವಂತೆ ಹಾಗೂ ಒತ್ತುವರಿಯಾಗಿರುವ ಭಾಗಗಳನ್ನು ಭೌತಿಕವಾಗಿ ಗುರುತಿಸುವಂತೆ ಮತ್ತು ಒತ್ತುವರಿ ತೆರವಿಗೆ ಅಗತ್ಯವಿರುವ ಸರ್ವೇ ಅಧಿಕಾರಿಗಳನ್ನು ನಿಯೋಜಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ, ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಬೆಂಗಳೂರು ಉತ್ತರದ ಎಡಿಎಲ್‌ಆರ್ ಪಾಲಿಕೆಗೆ ಸೆ.28ರಂದು ಪತ್ರ ಬರೆದು, ಬಿಬಿಎಂಪಿ ಅಧಿಕಾರಿಗಳಿಗೆ ಸಹಕರಿಸಲು ಮೂವರು ಸರ್ವೇಯರ್‌ಗಳನ್ನು ನಿಯೋಜಿಸುವುದಾಗಿ ತಿಳಿಸಿತ್ತು. ಜತೆಗೆ, ತಹಸೀಲ್ದಾರರು ನಕ್ಷೆ ಮತ್ತಿತರ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ಹೇಳಿತ್ತು. ಆದರೆ, ಈವರೆಗೂ ಸರ್ವೇಯರ್‌ಗಳು ಸಮೀಕ್ಷೆ ನಡೆಸುವುದಕ್ಕಾಗಿ ಹಾಜರಾಗಿಲ್ಲ. ಆದ್ದರಿಂದ, ಅ.14ರಂದು ಡಿಡಿಎಲ್‌ಆರ್‌ಗೆ ಜ್ಞಾಪನಾ ಪತ್ರ ಕಳುಹಿಸಲಾಗಿದೆ ಎಂದು ಪಾಲಿಕೆ ಅನುಪಾಲನಾ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ:ಆಧಾರ್ ಸಾಫ್ಟ್‌ವೇರ್, ದತ್ತಾಂಶ ಸಂಗ್ರಹಕ್ಕಾಗಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ: ಸುಪ್ರೀಂನಲ್ಲಿ ಪರಿಹಾರ ಕಂಡುಕೊಳ್ಳುವಂತೆ ಹೈಕೋರ್ಟ್ ಸೂಚನೆ

ABOUT THE AUTHOR

...view details