ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಸಹಿ ಹಾಕಿ 14.90 ಲಕ್ಷ ರೂ. ಬ್ಯಾಂಕ್ ಡ್ರಾ ಮಾಡಿ ತನ್ನ ಖಾತೆಗೆ ಜಮೆ ಮಾಡಿಕೊಂಡು ಪರಾರಿಯಾಗಿರುವ ಮನೆಗೆಲಸದವನ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಂಜಯ್ ಸಿರಗೌನಿ ಎಂಬುವವರು ನೀಡಿದ ದೂರಿನ ಮೇರೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಖಾಸಿಂ ಸಾಬ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಎಸ್.ಆರ್.ವಿಜಯ್ (84) ಆರೈಕೆಗಾಗಿ ಮೂರು ತಿಂಗಳ ಹಿಂದೆ ಖಾಸಿಂ ಸಾಬ್ ಎಂಬಾತನನ್ನು ಕೆಲಸಕ್ಕೆ ಸಂಜಯ್ ನಿಯೋಜಿಸಿದ್ದರು. ಆರಂಭದಲ್ಲಿ ಚೆನ್ನಾಗಿ ಆರೈಕೆ ಮಾಡಿ ಎಲ್ಲರ ವಿಶ್ವಾಸ ಸಂಪಾದಿಸಿದ್ದ. ಯೋಗಕ್ಷೇಮ ಜೊತೆಗೆ ಹಣದ ಅಗತ್ಯವಿದ್ದರೆ ಬ್ಯಾಂಕ್ ಗೆ ಹೋಗಿ ಹಣ ಡ್ರಾ ಮಾಡಿ ತಂದು ಕೊಡುವ ಮೂಲಕ ಮಾಲೀಕರ ನಂಬಿಕೆ ಗಳಿಸಿಕೊಂಡಿದ್ದ.