ಬೆಂಗಳೂರು:ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಆಗುತ್ತಿದ್ದಂತೆ ಆಘಾತ ಉಂಟಾಗಿದೆ. ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಮತ್ತೆ ಮೂರು ಜನ ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ 127 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1373 ಕ್ಕೆ ಏರಿಕೆಯಾಗಿದೆ. ಇನ್ನು ಈ ಮಾರಣಾಂತಿಕ ಸೋಂಕಿನಿಂದ ಒಟ್ಟು 40 ಮಂದಿ ಮೃತಪಟ್ಟಿದ್ದರೆ, 530 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 802 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾಗೆ ಬಲಿಯಾದ ಮೂರು ಜನರ ವಿವರ:
- P-1185 - ಬಳ್ಳಾರಿ ಮೂಲದ 61 ವರ್ಷದ ವೃದ್ಧ, ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. SARI ಸೋಂಕು ಕೂಡಾ ಇದ್ದು, ಬೆಂಗಳೂರಿಗೆ ಪ್ರಯಾಣಿಸಿದ ಹಿನ್ನೆಲೆ ಇತ್ತು. ಬಳ್ಳಾರಿಯಲ್ಲಿ ಇಂದು ಅಸುನೀಗಿದ್ದು, ಕೊರೊನಾ ಸೋಂಕು ಇರುವುದು ದೃಢವಾಗಿದೆ. ಇವರು ಮೊದಲೇ ಇಸ್ಕೆಮಿಕ್ ಹಾರ್ಟ್ ಡಿಸೀಸ್(IHD) ಯಿಂದ ಬಳಲುತ್ತಿದ್ದರು.
- P-1291: ವಿಜಯಪುರದ 65 ವರ್ಷದ ವೃದ್ಧ, ಮೊದಲೇ ಹೃದಯ ಸಂಬಂಧಿತ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರು. ನಿನ್ನೆ ಆಸ್ಪತ್ರೆಗೆ ಕರೆತರುವಾಗಲೇ ಸಾವನ್ನಪ್ಪಿದ್ದು, ಸೋಂಕು ಇರುವುದು ನಂತರ ದೃಢವಾಗಿದೆ.
- P-1364 - ಬೆಂಗಳೂರಿನ ನಾಗರಬಾವಿ ಪಾಪರೆಡ್ಡಿಪಾಳ್ಯದ 54 ವರ್ಷದ ವ್ಯಕ್ತಿ, ಕೊರೊನಾದಿಂದ ಮೇ 18ರಂದು ಮೃತಪಟ್ಟಿದ್ದಾನೆ. ಹೃದಯಾಘಾತದಿಂದ ಕುಸಿದು ಬಿದ್ದಿದ್ದರಿಂದ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆ ವ್ಯಕ್ತಿ ಮೃತಪಟ್ಟ ಬಳಿಕ ಆತನಿಗೆ ಕೊರೊನಾ ಇರುವುದು ಗೊತ್ತಾಗಿದೆ. ಈ ಪ್ರಕರಣ ಸೇರಿದಂತೆ ಬೆಂಗಳೂರಿನಲ್ಲಿ ಕೊರೊನಾಗೆ ಈವರೆಗೆ ಒಟ್ಟು 8 ಮಂದಿ ಬಲಿಯಾಗಿದ್ದಾರೆ.
ಇನ್ನು, ಗ್ರೀನ್ಝೋನ್ ಚಿಕ್ಕಮಗಳೂರಿಗೂ ಕೊರೊನಾ ಎಂಟ್ರಿ ಕೊಟ್ಟಿದ್ದು, ಸದ್ಯ ಮತ್ತಷ್ಟು ಆತಂಕ ಹೆಚ್ಚಿಸಿದೆ. ಮಂಡ್ಯದಲ್ಲಿ ಒಂದೇ ದಿನ 62 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಎಲ್ಲರೂ ಮಹಾರಾಷ್ಟ್ರ, ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇತ್ತ, ಅಂತಾರಾಜ್ಯದಿಂದ ಬರುತ್ತಿರುವವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಪಾಸಿಟಿವ್ ಕೇಸ್ ಏರಿಕೆ ಆಗುತ್ತಿವೆ.