ಬೆಂಗಳೂರು :ರಾಜ್ಯದಲ್ಲಿಂದು ಕೊರೊನಾ ಮಹಾಸ್ಫೋಟಗೊಂಡಿದ್ದು ಒಂದೇ ದಿನ 1,267 ಪ್ರಕರಣ ಹಾಗೂ ಬೆಂಗಳೂರಿನಲ್ಲಿ ಬರೋಬ್ಬರಿ 783 ಪ್ರಕರಣ ಪತ್ತೆಯಾಗಿರುವುದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಲಾಕ್ಡೌನ್ ಸಡಿಲಿಕೆಯಿಂದ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ 13,190ಕ್ಕೇರಿದೆ. ಇಂದು 220 ಮಂದಿ ಗುಣಮುಖರಾಗಿದ್ದು, ಒಟ್ಟು 7,507 ಜನ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 243 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಕೊರೊನಾ ಸೋಂಕಿಗೆ 16 ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 207ಕ್ಕೆ ಏರಿದೆ. ಬೆಂಗಳೂರಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಸೋಂಕಿತರ ಸಂಖ್ಯೆ 3,314ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಈವರೆಗೆ ರಾಜಧಾನಿಯಲ್ಲಿ ಮಹಾಮಾರಿ 88 ಮಂದಿ ಬಲಿಯಾಗಿದ್ದಾರೆ.
6 ಲಕ್ಷಕ್ಕೇರಲಿದೆ ಪರೀಕ್ಷೆಗಳ ಸಂಖ್ಯೆ :ರಾಜ್ಯದಲ್ಲಿ ಈವರೆಗೆ 5,95,470 ಮಂದಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಕೆಲ ದಿನದಲ್ಲೇ 6 ಲಕ್ಷ ಗಡಿದಾಟಲಿದೆ. ಈ ಪೈಕಿ 5,66,543 ಮಂದಿಗೆ ನೆಗೆಟಿವ್ ವರದಿ ಬಂದಿದೆ. 13,190 ಪಾಸಿಟಿವ್ ಕೇಸ್ ವರದಿ ಆಗಿವೆ. ಪ್ರಾಥಮಿಕ ಸಂಪರ್ಕಿತರು 19,195 ಇದ್ದರೆ, 16,314 ಮಂದಿ ದ್ವಿತೀಯ ಸಂಪರ್ಕದಲ್ಲಿದ್ದಾರೆ.
ಬೆಂಗಳೂರಿನಲ್ಲಿ 100ರ ಗಡಿದಾಟಲಿದೆ ಸಾವಿನ ಸಂಖ್ಯೆ:ಬೆಂಗಳೂರಿನಲ್ಲಿ ಒಂದೇ ದಿನ 783 ಕೇಸ್ ದೃಢಪಟ್ಟಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಈವರೆಗೆ 3,314 ಸೋಂಕಿತರಲ್ಲಿ 533 ಮಂದಿ ಬಿಡುಗಡೆಯಾಗಿದ್ದಾರೆ. 2,692 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ 88 ಮಂದಿ ಬಲಿಯಾಗಿದ್ದು, ಇದರ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕವಿದೆ. ಇತ್ತ ತೀವ್ರನಿಗಾ ಘಟಕದಲ್ಲಿ 155 ಮಂದಿ ಇದ್ದಾರೆ.
ಆರೈಕೆ ಕೇಂದ್ರದ ಬಗ್ಗೆ ಬಿಬಿಎಂಪಿ ಆದೇಶ ಆರೈಕೆ ಕೇಂದ್ರದ ಬಗ್ಗೆ ಬಿಬಿಎಂಪಿ ಆದೇಶ ಇನ್ನೊಂದೆಡೆ ಕೋವಿಡ್-19 ಸೋಂಕಿನ ಲಕ್ಷಣ ರಹಿತ ವ್ಯಕ್ತಿಗಳನ್ನು ನಿರ್ವಹಿಸಬೇಕಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತ ಕೋವಿಡ್-19 ಆರೈಕೆ ಕೇಂದ್ರ (CCC) ಗಳನ್ನು ಹೆಚ್ಚಿಸುವ ಅಗತ್ಯವಿದೆ. ಸರ್ಕಾರವು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಬೆಂಗಳೂರು (200 ಹಾಸಿಗೆಗಳು), ಜಿಕೆವಿಕೆ ಕೃಷಿ ವಿದ್ಯಾರ್ಥಿ ನಿಲಯಗಳು, ವಿಶ್ವವಿದ್ಯಾಲಯ ಆವರಣ (600 ಹಾಸಿಗೆಗಳು), ಜಿಕೆವಿಕೆ ತೋಟಗಾರಿಕೆ ವಿದ್ಯಾರ್ಥಿ ನಿಲಯಗಳು, ವಿಶ್ವವಿದ್ಯಾಲಯ ಆವರಣ (400 ಹಾಸಿಗೆಗಳು), ಹೋಟೆಲ್ ಸಿಟಿ ಸೆಂಟರ್ ಇಂಟರ್‌ನ್ಯಾಷನಲ್ ಬೆಂಗಳೂರು (200 ಹಾಸಿಗೆಗಳು), ಚಾನ್ಸರಿ ಪೆವಿಲಿಯನ್, ರೆಸಿಡೆನ್ಸಿ ರಸ್ತೆ ಬೆಂಗಳೂರು (200 ಹಾಸಿಗೆಗಳು) ಇವುಗಳನ್ನು ಆರೈಕೆ ಕೇಂದ್ರವನ್ನಾಗಿ ಮಾಡಲು ಆದೇಶಿಸಿದೆ.