ಬೆಂಗಳೂರು:ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹತೆ ಮಾಡಿ ನೀಡಿದ ತೀರ್ಪಿನಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಉಳಿದ 12 ಅತೃಪ್ತ ಶಾಸಕರಲ್ಲಿಯೂ ಅನರ್ಹತೆ ಭೀತಿ ಉಂಟಾಗಿದೆ.
ಸ್ಪೀಕರ್ ಅವರು ತಮ್ಮ ರಾಜೀನಾಮೆಯನ್ನು ಅಂಗೀಕರಿಸಬಹುದೆಂದು ಹಲವು ಅತೃಪ್ತರು ಭಾವಿಸಿದ್ದರು. ಆದರೆ, ಮೂವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರಿಂದ ತಮ್ಮನ್ನೂ ಅನರ್ಹಗೊಳಿಸಿದರೆ ಹೇಗೆ ಎನ್ನುವ ಒತ್ತಡಲ್ಲಿದ್ದಾರೆಂದು ತಿಳಿದು ಬಂದಿದೆ.
ಅತೃಪ್ತ ಶಾಸಕರು (ಸಂಗ್ರಹ ಚಿತ್ರ) ಶಾಸಕರಾದ ಬಿ.ಸಿ.ಪಾಟೀಲ್, ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಡಾ. ಕೆ.ಸುಧಾಕರ್, ಎಂಟಿಬಿ ನಾಗರಾಜ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ, ಪ್ರತಾಪಗೌಡ ಪಾಟೀಲ್, ಹೆಚ್.ವಿಶ್ವನಾಥ್, ಕೆ.ಗೋಪಾಲಯ್ಯ, ನಾರಾಯಣಗೌಡ ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಅವರು ಅಂಗೀಕರಿಸದೇ ಬಾಕಿ ಉಳಿಸಿಕೊಂಡಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಶಾಸಕ ಸ್ಥಾನದಿಂದ ಅನರ್ಹತೆಗೊಳಿಸಬೇಕು ಎಂದು ಕಾಂಗ್ರೆಸ್ ಪಕ್ಷ ದೂರು ನೀಡಿದೆ. ಈ ದೂರನ್ನೇ ಆಧರಿಸಿ ಮೂವರು ಶಾಸಕರನ್ನು ಅನರ್ಹ ಮಾಡಿದಂತೆ ತಮ್ಮನ್ನೂ ಅನರ್ಹಗೊಳಿಸಿದರೆ ಮುಂದೇನು ಎನ್ನುವ ಆತಂಕ ಅತೃಪ್ತರನ್ನು ಕಾಡತೊಡಗಿದೆ.
ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಕ್ಕೆ ಅತೃಪ್ತರ ವಿರುದ್ಧ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೇಸರದಿಂದಲೇ ತಮ್ಮ ರಾಜೀನಾಮೆ ಅಂಗೀಕಾರ ಮಾಡುವ ಬದಲು ಕಾಂಗ್ರೆಸ್ ಮತ್ತು ಜೆಡಿಎಸ್ ದೂರುಗಳ ಹಿನ್ನೆಲೆಯಲ್ಲಿ ಅನರ್ಹತೆ ಮಾಡಿದರೆ ಮತ್ತೆ ಕಾನೂನು ಸಮರ ನಡೆಸಬೇಕಲ್ಲಾ ಎಂದು ಅತೃಪ್ತ ಶಾಸಕರು ಚಿಂತಿಸುತ್ತಿದ್ದಾರೆ.
ಅತೃಪ್ತ ಶಾಸಕರು (ಸಂಗ್ರಹ ಚಿತ್ರ) ಶಾಸಕ ಸ್ಥಾನದಿಂದ ಅನರ್ಹತೆ ಹೊಂದಿದರೆ ಉಪ ಚುನಾವಣೆಗೆ ನಿಲ್ಲುವಂತಿಲ್ಲ. ಬಿಜೆಪಿ ಸರ್ಕಾರ ಬಂದರೆ ಸಚಿವರಾಗಲೂ ಅವಕಾಶ ಇರುವುದಿಲ್ಲ. ಹೀಗಾದರೆ ರಾಜಕೀಯ ಭವಿಷ್ಯ ಹೇಗೆ ಎನ್ನುವ ಆತಂಕ ಅತೃಪ್ತರಲ್ಲಿ ಉಂಟಾಗಿದೆ.
ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರನ್ನು ಅನರ್ಹಗೊಳಿಸಿದ ಆದೇಶಕ್ಕೆ ಕೋರ್ಟ್ನಲ್ಲಿ ಮನ್ನಣೆ ಸಿಗುವುದಿಲ್ಲ ಎನ್ನುವ ವಿಶ್ವಾಸ ಅತೃಪ್ತರಲ್ಲಿ ಇದೆಯಾದರೂ ಅನರ್ಹತೆ ಭೀತಿ ದೂರವಾಗಿಲ್ಲ.