ಬೆಂಗಳೂರು :ನಗರದ ಜಿಕೆವಿಕೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳಕ್ಕೆ ಅದ್ದೂರಿ ತೆರೆ ಬಿದ್ದಿದ್ದು, ಈ ಸಲ ಮೇಳಕ್ಕೆ ಭಾರಿ ಸ್ಪಂದನೆ ಸಿಕ್ಕಿದ್ದು, ಭೇಟಿ ನೀಡಿದವರ ಸಂಖ್ಯೆ 15.67 ಲಕ್ಷ ದಾಟಿದೆ. ಜೊತೆಗೆ, 5.28 ಕೋಟಿ ವ್ಯವಹಾರ ನಡೆದಿದೆ. ಆರಂಭದ ದಿನಕ್ಕಿಂತ ವಾರಾಂತ್ಯದ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಮೇಳದ ವಿಶೇಷತೆ ವೀಕ್ಷಿಸಿದರು.
ಉದ್ಘಾಟನಾ ದಿನವಾದ ಶುಕ್ರವಾರ 1.31 ಲಕ್ಷ ಜನರು ಆಗಮಿಸಿದ್ದರೆ, ವಾರಾಂತ್ಯದ ಶನಿವಾರ ಈ ಸಂಖ್ಯೆ ಬರೋಬ್ಬರಿ 5.48 ಲಕ್ಷದಷ್ಟಿತ್ತು. ಭಾನುವಾರವಾದ ಮೂರನೇ ದಿನ ಕ್ರಿಕೆಟ್ ನಡುವೆಯೂ 5.10 ಲಕ್ಷ ಜನರು ಭೇಟಿ ನೀಡಿದ್ದು, ಮೂರು ದಿನದಲ್ಲಿ 11.89 ಲಕ್ಷ ಜನರು ಕೃಷಿ ಮೇಳವನ್ನು ವೀಕ್ಷಿಸಿದ್ದರು. ನಾಲ್ಕನೇ ಹಾಗೂ ಕೊನೆಯ ದಿನ ಅಂದರೆ ಇಂದು 3.78 ಲಕ್ಷ ಜನ ವೀಕ್ಷಕರು ಬಂದು ಕೃಷಿ ಮೇಳ ಆಸ್ಪಾದಿಸಿದ್ದಾರೆ. ಅಲ್ಲದೆ ವಾರಾಂತ್ಯ ದಿನಗಳಾದ ಶನಿವಾರ 1.65 ಲಕ್ಷ ಭಾನುವಾರ 1.45 ಕೋಟಿ ವ್ಯವಹಾರ ನಡೆದಿತ್ತು. ಇದು ಕೃಷಿಮೇಳದ ಅದ್ಧೂರಿ ಯಶಸ್ಸಿಗೆ ನಿದರ್ಶನವಾಗಿದೆ.
ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಹಾಗೂ ಸಾರ್ವಜನಿಕರು ಬಂದು ಕೃಷಿಮೇಳವನ್ನು ಅನುಭವಿಸಿದರು. ಒಂದೆಡೆ ಸಿರಿಧಾನ್ಯ ಮೇಳ ಗಮನ ಸೆಳೆದರೆ ಮತ್ತೊಂದೆಡೆ ಕೃಷಿ ಪೂರಕ ಆವಿಷ್ಕಾರಗಳ ಪ್ರದರ್ಶನ ಗಮನ ಸೆಳೆಯಿತು. ಸೋಲಾರ್ ಪಂಪ್ಗಳ ಪ್ರಾತ್ಯಕ್ಷಿಕೆ, ಕಸದಿಂದ ಬೂಸಾ ಮಾಡುವ ಯಂತ್ರೋಪಕರಣಗಳ ಪ್ರದರ್ಶನ, ಸೌದೆ ಒಲೆ ಬಾಯ್ಲರ್ಗಳು, ಹವಾಮಾನ ಮುನ್ಸೂಚನೆ, ಮಣ್ಣಿನಲ್ಲಿ ನೀರಿನ ಅಂಶ ನಿರ್ವಹಣೆ, ವಿವಿಧ ತಳಿಗಳ ಕುರಿ, ಕೋಳಿ ಸಾಕಾಣಿಕೆ, ಜೇನು ಕೃಷಿ ಹೀಗೆ ಕೃಷಿಯ ಎಲ್ಲ ಚಟುವಟಿಕೆ, ಆಧುನಿಕ ಯಂತ್ರೋಪಕರಣಗಳ ಬಳಕೆ, ಸಾವಯವ ಕೃಷಿ, ಸಿರಿಧಾನ್ಯ ಬಳಕೆ ಕುರಿತು ಜನರು ಮಾಹಿತಿ ಪಡೆದುಕೊಂಡರು.