ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಲಸಿಕೆ ಹಂಚಿಕೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಮತ್ತೊಂದು ಯೋಜನೆ ರೂಪಿಸಿದೆ. ಇಡೀ ದೇಶದಲ್ಲೇ ಲಸಿಕೆ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಬಿಬಿಎಂಪಿ ದಿನಕ್ಕೆ ಒಂದು ಲಕ್ಷದ ಗಡಿ ಮೀರಿ ವ್ಯಾಕ್ಸಿನ್ ಹಂಚಿಕೆ ಮಾಡುತ್ತಿದೆ. ಅದರ ವ್ಯಾಪ್ತಿ ಇದೀಗ ಮತ್ತಷ್ಟು ಹೆಚ್ಚಾಗಲಿದೆ.
ದಿನದ 12 ತಾಸು ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್:ಬೃಹತ್ ಮಹಾನಗರ ಪಾಲಿಕೆ ಲಸಿಕೆ ಹಂಚಿಕೆಯನ್ನು ತೀವ್ರಗತಿಯಲ್ಲಿ ನಡೆಸುತ್ತಿದೆ. ಆದಷ್ಟು ಬೇಗ ಪೂರ್ಣ ಪ್ರಮಾಣದ ಲಸಿಕೆ ಹಂಚಿಕೆ ಪೂರ್ಣಗೊಳಿಸುವ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಬಂದಿರುವ ಬಿಬಿಎಂಪಿ, ಲಸಿಕೆ ವಿತರಣೆಯ ಸಮಯವನ್ನು ವಿಸ್ತರಿಸಿದೆ. ಸದ್ಯ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಮಾತ್ರ ಪಾಲಿಕೆ ಸೆಂಟರ್ಗಳಲ್ಲಿ ಡೋಸ್ ನೀಡಲಾಗುತ್ತಿತ್ತು. ಆದರೆ ಇದೀಗ ದಿನದ 12 ತಾಸು ಲಸಿಕೆ ವಿತರಣೆ ಮಾಡಲು ಪಾಲಿಕೆ ನಿರ್ಧಾರ ಮಾಡಿದೆ.
ದೇಶದಲ್ಲಿ ಲಸಿಕೆ ಹಂಚಿಕೆಯಲ್ಲಿ ಮೂಂಚೂಣಿಯಲ್ಲಿರುವ ರಾಜ್ಯ ರಾಜಧಾನಿಯಲ್ಲಿ ದಿನದ 12 ತಾಸು ಲಸಿಕೆ ನೀಡಲು ಪಾಲಿಕೆ ನಿರ್ಧರಿಸಿದೆ.
28 ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ವ್ಯಾಕ್ಸಿನೇಷನ್ ಸೆಂಟರ್: ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ದಿನದಲ್ಲಿ 7 ಗಂಟೆ ಮಾತ್ರ ಪಾಲಿಕೆ ಲಸಿಕೆ ಹಂಚಿಕೆ ಮಾಡುತ್ತಿತ್ತು. ಈ ಅವಧಿಯನ್ನು ವಿಸ್ತರಿಸಿ ದಿನದ 12 ತಾಸು ಲಸಿಕೆ ಹಂಚಿಕೆ ಮಾಡಲಿದೆ. ರಾಜಧಾನಿಯ 28 ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ವ್ಯಾಕ್ಸಿನೇಷನ್ ಸೆಂಟರ್ ತೆರೆದು, 12 ತಾಸು ಲಸಿಕೆ ನೀಡಲು ಮುಂದಾಗಿದೆ.