ಬೆಂಗಳೂರು: ವೈದ್ಯಕೀಯ ಆಮ್ಲಜನಕ ಹೊತ್ತು ಬಂದ 11ನೇ ಮತ್ತು 12ನೇ ಎಕ್ಸ್‌ಪ್ರೆಸ್ ರೈಲು ಇಂದು ಕರ್ನಾಟಕ ತಲುಪಿದ್ದು, ರಾಜ್ಯಕ್ಕೆ 240 ಟನ್ ಹೆಚ್ಚುವರಿಯಾಗಿ ಆಮ್ಲಜನಕವನ್ನು ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿದೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿಯಾಗಿ ಆಕ್ಸಿಜನ್ ನೀಡುತ್ತಿದ್ದು, ಮೂರನೇ ಅಲೆ ಬರುತ್ತೆ ಎನ್ನುವ ಮುನ್ಸೂಚನೆ ಇರುವುದರಿಂದ ಸಮರ್ಥವಾಗಿ ಎದುರಿಸಲು ಮತ್ತು ಕಳೆದ ಒಂದು ತಿಂಗಳ ಹಿಂದೆ ಚಾಮರಾಜನಗರ, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಆಕ್ಸಿಜನ್ ಕೊರತೆಯಿಂದ ಹಲವಾರು ಮಂದಿ ಮೃತಪಟ್ಟ ಘಟನೆ ಮತ್ತೆ ಮರುಕಳಿಸಬಾರದು ಎನ್ನುವ ದೃಷ್ಟಿಯಿಂದ ಕಳುಹಿಸಲಾಗಿದೆ. ಈಗಾಗಲೇ 1,200 ಟನ್ ನೀಡಿದ್ದಾರೆ. ಆದರೂ ಇಂದು 240 ಟನ್ ಆಮ್ಲಜನಕವನ್ನ ಎರಡು ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಕಳುಹಿಸಿದೆ.
ರಾಜ್ಯಕ್ಕೆ 240 ಟನ್ ಹೆಚ್ಚುವರಿ ವೈದ್ಯಕೀಯ ಆಮ್ಲಜನಕ ಕಳಿಸಿಕೊಟ್ಟ ಕೇಂದ್ರ ಸರ್ಕಾರ 11 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಒಡಿಶಾದ ರೂರ್ಕೆಲಾದಿಂದ ಬೆಂಗಳೂರಿಗೆ ಬೆಳಗ್ಗೆ 8 ಗಂಟೆಗೆ ಬಂದರೆ ಮತ್ತೊಂದು 12ನೇ ರೈಲು ಗುಜರಾತ್ನ ಜಮುನಾ ನಗರ್ ನಿಂದ ಬೆಂಗಳೂರಿನ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಮಧ್ಯಾಹ್ನ 12:30ಕ್ಕೆ ಬಂದಿದೆ. ಈ ಎರಡು ಎಕ್ಸ್‌ಪ್ರೆಸ್ ರೈಲುಗಳು 12 ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ 240 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಸಾಗಿಸಿದೆ.
ಈ ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳ ತ್ವರಿತ ಸಾಗಣೆ ಸಕ್ರಿಯಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ಅನ್ನು ರಚಿಸಿದೆ. ಅಂದರೆ, ಈ ರೈಲುಗಳು ನಿಲುಗಡೆ ಮುಕ್ತವಾಗಿ ಚಲಿಸುತ್ತಿವೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಯಾಸ್ ಚಂಡಮಾರುತವು ಎದುರಿಸಿದ ಸವಾಲುಗಳ ಹೊರತಾಗಿಯೂ, ಭಾರತೀಯ ರೈಲ್ವೆ ಸಮಯೋಚಿತವಾಗಿ ಲೋಡ್ ಮತ್ತು ದ್ರವ ವೈದ್ಯಕೀಯ ಆಮ್ಲಜನಕದ ಸಾಗಣೆ ಖಾತ್ರಿಪಡಿಸಿದೆ.
ಇಲ್ಲಿಯವರೆಗೆ ಕರ್ನಾಟಕವು ರೈಲ್ವೆ ಮೂಲಕ 1,440 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಪಡೆದಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ಇದುವರೆಗೆ 247 ಕ್ಕೂ ಹೆಚ್ಚು ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳ ಮೂಲಕ 16,000 ಟನ್‌ಗಳಿಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಿದೆ.