ಬೆಂಗಳೂರು:ಹಿಂದುಳಿದ/ದಲಿತ ಸಮಾಜದ ವಿವಿಧ ಮಠಗಳ ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ 65 ಮಠಗಳ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 119 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ. ಬಜೆಟ್ಗೂ ಮುನ್ನ ಹಿಂದುಳಿದ ಸಮುದಾಯ ಮತ್ತು ದಲಿತ ವರ್ಗದ ಮಠಾಧೀಶರ ಒಕ್ಕೂಟದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅನುದಾನ ನೀಡುವಂತೆ ಮಾಡಿದ್ದ ಮನವಿಗೆ ಸರ್ಕಾರ ಸ್ಪಂದಿಸಿದೆ.
ಮಠಗಳ ಮನವಿಯನ್ನು ಪರಿಗಣಿಸಿದ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಿದ್ದರು. ಇದರಂತೆ ಕಾಗಿನೆಲೆ ಮಹಾಸಂಸ್ಥಾನ, ಮಾದಾರ ಚನ್ನಯ್ಯ ಗುರಪೀಠ ಟ್ರಸ್ಟ್, ವಾಲ್ಮೀಕಿ ಗುರುಪೀಠ ಸೇರಿದಂತೆ 65 ಮಠಗಳ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 119 ಕೋಟಿ ರೂ. ಅನುದಾನ ನೀಡಿ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ಸಿಎಂ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಈ ಅನುದಾನ ನೀಡಲಾಗುವುದು. ಹಿಂದುಳಿದ/ದಲಿತ ಸಮುದಾಯದ ವಿವಿಧ ಮಠಗಳ ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾವನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ. ಈ ಕೆಳಕಂಡಂತೆ ಅನುದಾನ ನೀಡಲಾಗಿದೆ.
ಕಾಗಿನೆಲೆ ಮಹಾಸಂಸ್ಥಾನ, ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಮಹಾಸಂಸ್ಥಾನ ಮಠ, ಶಿವಶರಣ ಶ್ರೀ ಮಾದಾರ ಚನ್ನಯ್ಯ ಗುರುಪೀಠ, ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠ, ವಾಲ್ಮೀಕಿ ಗುರುಪೀಠಗಳಿಗೆ ತಲಾ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮಾಚಿದೇವ ಮಹಾಸಂಸ್ಥಾನ ಮಠ, ಯಾದವ ಮಹಾಸಂಸ್ಥಾನ ಮಠ, ಹಡಪದ ಅಪ್ಪಣ್ಣ ಗುರುಪೀಠ, ಕುಂಬಾರ ಗುರುಪೀಠ, ಶ್ರೀ ನಾರಾಯಣ ಗುರು ಮಹಾಸಂಸ್ಥಾನ, ಶ್ರೀ ಮಹಾಲಕ್ಷ್ಮಿ ತಿಗಳರ ಮಹಾಸಂಸ್ಥಾನ ಟ್ರಸ್ಟ್, ಭಗವದ್ ರಾಮಾನುಜ ಟ್ರಸ್ಟ್, ನಿಕೇತನ ಎಜುಕೇಷನ್ ಟ್ರಸ್ಟ್, ಆನಂದಮಯ ಟ್ರಸ್ಟ್‌ಗೆ ತಲಾ 3 ಕೋಟಿ ರೂ. ನೀಡಲಾಗಿದೆ.
ಕಾಗಿನೆಲೆ ಮಹಾಸಂಸ್ಥಾನದ ಶಾಖಾಮಠ, ವನಶ್ರೀ ಜಯದೇವ ಟ್ರಸ್ಟ್, ಛಲವಾದಿ ಗುರುಪೀಠ, ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ, ಮೇದಾರ ಕೇತೇಶ್ವರ ಮಠ, ಎಸ್.ಜೆ.ಎಸ್.ಮಹಾಸಂಸ್ಥಾನ, ಮುದ್ಗರ ಟ್ರಸ್ಟ್, ಶಿವಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿ ಟ್ರಸ್ಟ್, ಹೇಮವೇಮ ಸದ್ದಾವನ ಪೀಠಕ್ಕೆ ತಲಾ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠ, ಬೃಂಗೇಶ್ವರ ಮಠ, ಸಿದ್ದಶ್ರೀ ಸಂಸ್ಥೆ, ಸವಿತಾ ಪೀಠ, ಸರೂರ ಮಹಾಸಂಸ್ಥಾನ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಗುರುಪೀಠ ಟ್ರಸ್ಟ್, ಅಮೋಘ ಸಿದ್ದೇಶ್ವರ ಮಠ ಟ್ರಸ್ಟ್, ಗುರು ಸೋಮೇಶ್ವರ ಪ್ರತಿಷ್ಠಾನ, ಅದಿಶಕ್ತಿ ಮಹಾಸಂಸ್ಥಾನ ಮಠ, ಮಹಿಳಾ ಮಠಾಧೀಶರ ಸಂಸತ್, ಜಗದ್ಗುರು ಗೌಳಿ ಗುರುಪೀಠ ಮಹಾಸಂಸ್ಥಾನ ಮಠ, ಸದ್ಗುರು ಪರಮಹಂಸ ವಿದ್ಯಾವರೇಣ್ಯ ಯೋಗೇಶ್ವರ ಪಾರಮಾರ್ಥ ವಿಶ್ವಸ್ಥ ಧಾರ್ಮಿಕ ಟ್ರಸ್ಟ್ ಸೇರಿದಂತೆ ಇತರೆ ಮಠಗಳ ಶಿಕ್ಷಣ ಸಂಸ್ಥೆಗಳಿಗೆ ತಲಾ ಒಂದು ಕೋಟಿ ರೂ. ನೀಡಿ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ:ಬಿಸಿಯೂಟ ನೌಕರರಿಗೆ ಗುಡ್ ನ್ಯೂಸ್ : ಗೌರವಧನ ₹1,000 ಹೆಚ್ಚಿಸಿ ಆದೇಶ