ಬೆಂಗಳೂರು: ಮಹಾನಗರ ಉಸ್ತುವಾರಿ ಸಚಿವರೂ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಕಾಂಗ್ರೆಸ್ ಪಕ್ಷ ದೊಡ್ಡ ಆರೋಪ ಮಾಡಿದೆ. ಮಹಾನಗರದಲ್ಲಿ ಚಿಲುಮೆ ಸಂಸ್ಥೆಯಿಂದ ನಡೆದಿರುವ ಮತದಾರರ ಗುರುತಿನ ಚೀಟಿ ಮಾಹಿತಿ ಕಲೆಹಾಕುವ ವಿಚಾರದಲ್ಲಿ ನಡೆದಿರುವ ಅಕ್ರಮದ ಹಿಂದೆ ಸ್ವತಃ ಸಿಎಂ ಇದ್ದಾರೆ ಎಂದು ಆರೋಪಿಸಿದೆ.
ಗುರುತಿನ ಚೀಟಿ ವಿಚಾರದಲ್ಲಿ ನಡೆದಿರುವ ಅಕ್ರಮದಲ್ಲಿ ಸಿಎಂ ನೇರವಾಗಿ ಕಿಂಗ್ ಪಿನ್ ಪಾತ್ರ ವಹಿಸಿದ್ದು, ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ. ಕನ್ನಡಿಗರ ಖಾಸಗಿ ದಾಖಲೆಯನ್ನು ಸರ್ಕಾರ ಕದಿಯುವ ಯತ್ನ ಮಾಡಿದೆ. ಇದನ್ನು ನಾವು ಖಂಡಿಸುವ ಜತೆಗೆ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುತ್ತೇವೆ. ಜನತಾ ಜನಾರ್ದನನ ಮುಂದೆ ಬರುತ್ತೇವೆ. ಜನರ ಪರವಾಗಿ ಪ್ರಶ್ನೆ ಮಾಡುತ್ತೇವೆ ಎನ್ನುವ ಮೂಲಕ ಮತ್ತೊಂದು ಜನಪರ ಹೋರಾಟಕ್ಕೆ ಕಾಂಗ್ರೆಸ್ ಕರೆಕೊಟ್ಟಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಬೆಂಗಳೂರು ನಗರ ಶಾಸಕರು ಈ ಗಂಭೀರ ಆರೋಪ ಮಾಡಿದ್ದು, 11 ಪ್ರಶ್ನೆಯನ್ನು ಸಿಎಂ ಹಾಗೂ ಸರ್ಕಾರದ ಮುಂದಿಟ್ಟಿದೆ.
ರಾಜ್ಯ ಸರ್ಕಾರ ಹಾಗೂ ಸಿಎಂಗೆ ಕಾಂಗ್ರೆಸ್ ಕೇಳಿದ ಪ್ರಶ್ನೆಯ ಸಂಪೂರ್ಣ, ಸವಿಸ್ತಾರ ವಿವರ ಇಲ್ಲಿದೆ:
1. ಬಿಬಿಎಂಪಿ ಉಸ್ತುವಾರಿಗಳಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ವಿರುದ್ಧ ಇನ್ನೂ ಏಕೆ ಎಫ್ಐಆರ್ ದಾಖಲಾಗಿಲ್ಲ? ಮತದಾರರ ದತ್ತಾಂಶವನ್ನು ಕದ್ದ ಚಿಲುಮೆ ಎಂಬ ಸಂಸ್ಥೆಯ ಜೊತೆಯಲ್ಲಿ ಇವರು ಕೂಡ ನೇರವಾಗಿ ತಪ್ಪಿತಸ್ಥರಾಗಿದ್ದಾರಲ್ಲವೇ? ಪ್ರಮುಖ ಆರೋಪಿಯಾಗಿರುವ ಮುಖ್ಯಮಂತ್ರಿ ಎರಡನೇ ಪ್ರಮುಖ ಆರೋಪಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ ನೀಡುತ್ತಿರುವುದು ಕ್ರೂರ ಹಾಸ್ಯವಲ್ಲವೇ?
2. ಮತದಾರರ ದತ್ತಾಂಶ ಕಳ್ಳತನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರದ್ದೇ ಸುಳ್ಳುಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡಿಲ್ಲವೇ?
ಒಂದೆಡೆ ಸಿಎಂ ಬಸವರಾಜ ಬೊಮ್ಮಾಯಿ, ಮತದಾರರ ದತ್ತಾಂಶ ಕದಿಯುವುದು ಸಾಧ್ಯವೇ ಇಲ್ಲ. ಅದೊಂದು ಆಧಾರ ರಹಿತ ಆರೋಪ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಮತ್ತೊಂದೆಡೆ ಅವರೇ ಎಫ್ಐಆರ್ ದಾಖಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ತನಿಖೆಗೆ ಆದೇಶಿಸಿದ್ದಾರೆ.
ಇದು ಸಿಎಂ ಬೊಮ್ಮಾಯಿ ಅವರ ವ್ಯತಿರಿಕ್ತ ನಿಲುವುಗಳನ್ನು ಜಾಹೀರು ಮಾಡುವುದಿಲ್ಲವೇ? ಖುದ್ದು ಸಿಎಂ ಅವರೇ ಈ ಆರೋಪಗಳನ್ನು 'ಆಧಾರರಹಿತ' ಎಂದು ತಿರಸ್ಕರಿಸಿದ ಮೇಲೆ ಯಾವುದೇ ಪೊಲೀಸ್ ಅಧಿಕಾರಿಯು ಎಫ್ಐಆರ್ ಅನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಾಗುತ್ತದೆಯೇ? ಹೀಗಿರುವಾಗ ಈ ತನಿಖೆಯ ಪ್ರಹಸನ ಕೇವಲ ಸತ್ಯವನ್ನು ಹೂತುಹಾಕುತ್ತದೆಯೇ ಹೊರತು ಮತ್ತೇನನ್ನು ಸಾಧಿಸುವುದಿಲ್ಲ.
3. ಚಿಲುಮೆ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಚಿಲುಮೆ ಎಂಟರ್ಪ್ರೈಸಸ್ ಪ್ರೈವೆಟ್ ಲಿಮಿಟೆಡ್ ಮತ್ತು ಡಿಎಪಿ ಹೊಂಬಾಳೆ ಪ್ರೈವೆಟ್ ಲಿಮಿಟೆಡ್ ವಿರುದ್ಧ ಏಕೆ ಎಫ್ಐಆರ್ ದಾಖಲಾಗಿಲ್ಲ? ಮೂರೂ ಘಟಕಗಳ ಮಾಲೀಕರು/ನಿರ್ದೇಶಕರಾದ ಕೃಷ್ಣಪ್ಪ ರವಿಕುಮಾರ್, ಭೈರಪ್ಪ ಶೃತಿ ಮತ್ತು ನರಸಿಂಹಮೂರ್ತಿ ಐಶ್ವರ್ಯ ವಿರುದ್ಧ ಏಕೆ ಎಫ್ಐಆರ್ ದಾಖಲಾಗಿಲ್ಲ? ದತ್ತಾಂಶ ಸಂಗ್ರಾಹಕರಲ್ಲೊಬ್ಬರಾದ ಲೋಕೇಶ್ ವಿರುದ್ಧ ಎಫ್ಐಆರ್ ಹಾಕಿದರೆ ಏನು ಪ್ರಯೋಜನ?
ಇದನ್ನೂ ಓದಿ:ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪ.. ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು
4. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಸುಮಾರು ಒಂದು ಕೋಟಿ ಮತದಾರರ ವೈಯುಕ್ತಿಕ ದತ್ತಾಂಶಗಳು ಎಲ್ಲಿವೆ ಎಂಬುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಮತ್ತು ಬಿಜೆಪಿ ಸರ್ಕಾರ ಏಕೆ ಉತ್ತರಿಸುತ್ತಿಲ್ಲ? ಡೇಟಾ ಎಲ್ಲಿ ಹೋಯಿತು? ಪ್ರತಿ ಮನೆ ಮತ್ತು ಆಯಾ ಪ್ರದೇಶಕ್ಕಾಗಿ ಸಿದ್ಧಪಡಿಸಲಾದ ವಿವರವಾದ ನಕ್ಷೆಗಳು ಎಲ್ಲಿವೆ?
5. ಸಂಪೂರ್ಣ ಡೇಟಾವನ್ನು ಅಪ್ಲೋಡ್ ಮಾಡಲಾಗಿರುವ ಚಿಲುಮೆ ಎಂಟರ್ಪ್ರೈಸಸ್ ಪ್ರೈವೆಟ್ ಲಿಮಿಟೆಡ್ ಒಡೆತನದ ಡಿಜಿಟಲ್ ಸಮೀಕ್ಷಾ ಎಂಬ ಖಾಸಗಿ ಆ್ಯಪ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರ ಇನ್ನೂ ಏಕೆ ವಶಪಡಿಸಿಕೊಂಡಿಲ್ಲ? ಬಿಜೆಪಿ ನಾಯಕರು ಮತ್ತು ಇತರರು ಸೇರಿದಂತೆ ಎಲ್ಲರಿಗೂ ಈ ಡೇಟಾದ ಮಾಹಿತಿ ಲಭ್ಯವಿದೆಯೇ? ಇದು ಒಂದು ರೀತಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನೇ ಭ್ರಷ್ಟಗೊಳಿಸಿದಂತಾಗುವುದಿಲ್ಲವೇ?
6. ಚಿಲುಮೆಗೆ ಯಾರು ಹಣ ನೀಡುತ್ತಿದ್ದಾರೆ ಮತ್ತು ಆ ಸಂಸ್ಥೆ ಬಿಬಿಎಂಪಿಗೆ ಉಚಿತವಾಗಿ ಏಕೆ ಕೆಲಸ ಮಾಡುತ್ತಿತ್ತು ಎಂಬುದನ್ನು ಬಹಿರಂಗಪಡಿಸಲು ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರ ಏಕೆ ನಿರಾಕರಿಸುತ್ತಿದೆ? ಗುತ್ತಿಗೆ ನೌಕರರಿಗೆ ಹಾಗೂ ಇತರ ಉಪಗುತ್ತಿಗೆ ಸಂಸ್ಥೆಗಳಿಗೆ ವೇತನ ನೀಡಲು ಈ ಕೋಟ್ಯಂತರ ರೂಪಾಯಿ ಹಣ ಎಲ್ಲಿಂದ ಬಂತು?
7. ವೋಟರ್ ಡಾಟಾ ಕಳ್ಳತನದ ಸಂಪೂರ್ಣ ಕಾರ್ಯಾಚರಣೆಗಾಗಿ ಚಿಲುಮೆ ಸಂಸ್ಥೆಯು ಸುಮಾರು 15,000 ಉದ್ಯೋಗಿಗಳನ್ನು ನೇಮಿಸಿಕೊಂಡಿರುವುದು ಸತ್ಯವೇ? ರೂ 20,000 – ರೂ 40,000 ಮಾಸಿಕ ವೇತನದಲ್ಲಿ ಡೇಟಾ ಸಂಗ್ರಹಿಸಲು ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ಗಳನ್ನು ನೇಮಿಸಿಕೊಳ್ಳಲು ಚಿಲುಮೆ ಜಾಹೀರಾತುಗಳನ್ನು ನೀಡಿಲ್ಲವೇ? ಚಿಲುಮೆ ಸಂಸ್ಥೆಯು ಸುಮಾರು ಉಪ ಕರಾರುಗಳನ್ನು ವೋಟರ್ ಐಡಿಗೆ ರೂ. 25 ಜೊತೆಗೆ ಪ್ರತಿ ವಿಷಯದ ಡೇಟಾಗೆ ರೂ. 50 ರಂತೆ ಪಾವತಿ ಮಾಡಿಲ್ಲವೇ?
ಪ್ರತಿ ಹೊಸ ಮತದಾರರನ್ನು ಗುರುತಿಸಲು 30 ರೂ. ಗಳ ಪಾವತಿಯನ್ನು ಮಾಡಲು BLO ಗೆ ನಮೂದು, ಜೊತೆಗೆ ತಂಡದ ನಾಯಕನಿಗೆ ಪ್ರತಿ ಪ್ರವೇಶಕ್ಕೆ 10 ರೂ., ತಂಡದ ನಾಯಕನ ಪ್ರತಿ ಪ್ರವೇಶಕ್ಕೆ 10 ರೂ. ಗಳ ಪಾವತಿ ಜೊತೆಗೆ ಪ್ರತಿ ಪ್ರವೇಶದ ಪರಿಶೀಲನೆಯ ಮೇಲೆ ಫಾರ್ಮ್ 7 ಗಾಗಿ 13 ರೂ. ಗಳ ಪಾವತಿ, ಪ್ರತಿ ಮತದಾರರಲ್ಲದವರನ್ನು ಗುರುತಿಸಲು 10 ರೂ.ಗಳ ಪಾವತಿ ಇತ್ಯಾದಿಗಳನ್ನು ಕೂಡ ನೀಡಿಲ್ಲವೇ ? ಚಿಲುಮೆ ಸಂಸ್ಥೆಯು ಎಷ್ಟು ಕೋಟಿ ಹಣ ಖರ್ಚು ಮಾಡಿದೆ ಮತ್ತು ಈ ಹಣ ಸಂಸ್ಥೆಗೆ ಎಲ್ಲಿಂದ ಬಂತು?
8. ಸಿಎಂ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಮತ್ತು ಬಿಜೆಪಿ ಸರ್ಕಾರ 2018-2022 ರ ನಡುವೆ ಲಿಖಿತ ಆದೇಶದ ಮೂಲಕ 'ಚುನಾವಣೆ ಸಂಬಂಧಿತ ಚಟುವಟಿಕೆಗಳು' ಮತ್ತು ಮತದಾರರ ಖಾಸಗಿ ಡೇಟಾ ಸಂಗ್ರಹಣೆಯನ್ನು ವಹಿಸಿಕೊಟ್ಟಿಲ್ಲವೇ? ಇಂತಹ 22 ಆದೇಶಗಳನ್ನು ಹೊರಡಿಸಿಲ್ಲವೇ?
ಸಿಎಂ ಬೊಮ್ಮಾಯಿ ಮತ್ತು ಬಿಬಿಎಂಪಿ ಲಿಖಿತ ಆದೇಶದ ಮೂಲಕ ಮತದಾರರ ಗುರುತಿನ ಚೀಟಿ ಮತ್ತು 'ಕುಟುಂಬದ ವಿವರ' ಸಂಗ್ರಹಿಸಲು 'ಚಿಲುಮೆ'ಗೆ ಅಧಿಕಾರ ನೀಡಿರುವುದು ಕಳ್ಳತನ ಮತ್ತು ಮತದಾರರ ಅಕ್ರಮ ಡಾಟಾ ಸಂಗ್ರಹಕ್ಕೆ ಅನುಮತಿ ನೀಡಿದಂತೆ ಅಲ್ಲವೇ? ಮತ್ತು ಇದು ಪ್ರಜಾಪ್ರತಿನಿಧಿ ಕಾಯಿದೆ 1951ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ಗೆ ಅಶ್ವತ್ಥ ನಾರಾಯಣ ಮೇಲೆ ಹೊಟ್ಟೆ ಉರಿ: ಸಂಸದ ಪಿ ಸಿ ಮೋಹನ್
9. ಬಸವರಾಜ ಬೊಮ್ಮಾಯಿ ಅವರು ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಭ್ರಷ್ಟಗೊಳಿಸಿದ್ದಾರೆ ಎಂಬುದಕ್ಕೆ ಮೇಲ್ನೋಟಕ್ಕೆ ಕಾಣುತ್ತಿರುವ ದೃಢವಾದ ಸಾಕ್ಷ್ಯವನ್ನು 'ಆಧಾರ ರಹಿತ' ಎಂದು ಹೇಳಿದರೆ ಚಿಲುಮೆ ಸಂಸ್ಥೆಯಿಂದ ನೇಮಕಗೊಂಡ ಹಲವಾರು ವ್ಯಕ್ತಿಗಳು ಮತದಾರರ ಖಾಸಗಿ ಡಾಟಾ ಸಂಗ್ರಹಿಸಿದ್ದಾರೆ ಮತ್ತು ಅವರಿಗೆ BLO ಕಾರ್ಡ್ಗಳನ್ನು ನೀಡಲಾಗಿತ್ತು ಎಂದು ವಿಡಿಯೋದಲ್ಲಿ ಹೇಳುತ್ತಿರುವುದು ಕಾಣುತ್ತಿಲ್ಲವೇ? ಇದು ಮುಖ್ಯಮಂತ್ರಿಯ ಸುಳ್ಳನ್ನು ಬಯಲಿಗೆಳೆಯುವುದಿಲ್ಲವೇ ಮತ್ತು ಅವರು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಸಾಬೀತಾಗುವುದಿಲ್ಲವೇ?
10. ಮತದಾರರ ಖಾಸಗಿ ಮಾಹಿತಿ ಪಡೆದಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮತದಾರರ ದತ್ತಾಂಶ ಕಳ್ಳತನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸುಳ್ಳುಗಳು ಕೆಆರ್ ಪುರದ ಮಾಜಿ ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಅವರ ಚುನಾವಣಾ ಅಫಿಡವಿಟ್ ಮೂಲಕ ಬಯಲಾಗಿದೆ. ಇದೇ ನಂದೀಶ್ ರೆಡ್ಡಿ ಅವರು ಚಿಲುಮೆ ಟ್ರಸ್ಟ್ಗೆ ರೂ 18 ಲಕ್ಷಗಳನ್ನು ಪಾವತಿಸಿರುವುದು ಕಾಣುತ್ತಿಲ್ಲವೇ?
ಸರಳವಾದ ಪ್ರಶ್ನೆ ಏನೆಂದರೆ, ಒಂದು ಟ್ರಸ್ಟ್ ಮತ್ತು ಕಂಪನಿಯು ಮತದಾರರ ವಿವರಗಳನ್ನು ಮತ್ತು ಅವರ ವೈಯಕ್ತಿಕ ಡಾಟಾವನ್ನು ಬಿಜೆಪಿ ರಾಜಕೀಯ ನಾಯಕರಿಗೆ ಕಮರ್ಷಿಯಲ್ ಆಗಿ ಮಾರಾಟ ಮಾಡಿದ್ದು ಏಕೆ? ಪಕ್ಷವು ಈ ಕೆಲಸವನ್ನು ಈ ಕಂಪನಿಗೆ ಯಾವುದೇ ಜಾಹೀರಾತು ಇಲ್ಲದೇ ಮತ್ತು ಅದರ ಅನುಮಾನಾಸ್ಪದ ಪೂರ್ವಾಪರಗಳನ್ನು ಪರಿಶೀಲಿಸದೆಯೇ ವಹಿಸಿಬಿಟ್ಟಿತೇ?
11. ಮತದಾರರ ದತ್ತಾಂಶ ಸಂಗ್ರಹಿಸಲು ಅಥವಾ ಖಾಸಗಿ ಆಪ್ಗೆ ಅಪ್ಲೋಡ್ ಮಾಡಲು ಬೊಮ್ಮಾಯಿ ಸರ್ಕಾರ ಅಥವಾ ಬಿಬಿಎಂಪಿಗೆ ಅಧಿಕಾರ ನೀಡಿಲ್ಲ ಎಂದು ಸ್ವತಃ ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರೇ ಹೇಳಲು ಮುಂದಾದಾಗ, ಈ ಕಾನೂನು ಉಲ್ಲಂಘನೆಯ ಹೊಣೆ ಬಿಬಿಎಂಪಿ ಉಸ್ತುವಾರಿ ಸಚಿವ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರ ಮೇಲೆ ಇದೆ ಅಲ್ಲವೇ? ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನ್ಯಾಯಯುತ ತನಿಖೆ ನಡೆಸಿ ಸಿಎಂ ಬೊಮ್ಮಾಯಿ ಅವರ ರಾಜೀನಾಮೆ ಪಡೆಯಬೇಕು ಅಥವಾ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕಿತ್ತೊಗೆಯಬೇಕಲ್ಲವೇ? ಹಾಗೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನಿನ ಪ್ರಕಾರ ಬಂಧಿಸಬೇಕಲ್ಲವೇ?
ಇದನ್ನೂ ಓದಿ:ಚಿಲುಮೆ ಶೈಕ್ಷಣಿಕ ಸಂಸ್ಥೆಯ ವಿರುದ್ಧ ತನಿಖೆ ನಡೆಸಲು ರಾಜ್ಯ ಚುನಾವಣಾ ಆಯೋಗದಿಂದ ತನಿಖಾಧಿಕಾರಿ ನೇಮಕ