ಬೆಂಗಳೂರು :ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ಪೆರೋಲ್ ಮೇಲೆ ಹೊರ ಹೋದ 11 ಮಂದಿ ಸಜಾ ಬಂಧಿಗಳು 17 ವರ್ಷ ಕಳೆದರೂ ಜೈಲಿಗೂ ಬರದೆ, ಪೊಲೀಸರಿಗೂ ಸಿಗದೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿ ಅಪರಾಧಿಗಳಾಗಿ ಸೆರೆಮನೆ ಸೇರಿದ್ದ 11 ಮಂದಿ ಕೈದಿಗಳು ನಾಪತ್ತೆಯಾಗಿದ್ದಾರೆ. ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪೊಲೀಸರು ಹುಡುಕುವ ಕೆಲಸಕ್ಕೆ ಹೋಗದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಸಜಾಬಂಧಿಗಳು ಎಸ್ಕೇಪ್ ಆದರೂ ಪೊಲೀಸರು ಡೌಂಟ್ಕೇರ್:
ಸೆಂಟ್ರಲ್ ಜೈಲಿನ ವ್ಯಾಪ್ತಿಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಗಳಲ್ಲಿ ಅಪರಾದಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು 2006 ರಿಂದಲೂ 2019ರವರೆಗೆ ಪೆರೋಲ್ ಮೇಲೆ ಹೊರ ಹೋಗಿದ್ದ ಸಜಾಬಂಧಿಗಳ ಪೈಕಿ 11 ಮಂದಿ ಕೈದಿಗಳು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಜೈಲಾಧಿಕಾರಿಗಳು ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರೂ ಪೊಲೀಸರು ಪತ್ತೆ ಹಚ್ಚಿಲ್ಲ.
ಹೈಕೋರ್ಟ್ನಲ್ಲಿ ಪಿಐಎಲ್ ಅರ್ಜಿ:
ಈ ಸಂಬಂಧ ಹೈಕೋರ್ಟ್ನಲ್ಲಿ ಪಿಐಎಲ್ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ತಲೆಮರೆಸಿಕೊಂಡಿರುವ 11 ಮಂದಿ ಸಜಾಬಂಧಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಯ ಪೊಲೀಸರು ನಾಪತ್ತೆಯಾಗಿರುವ ಅಪರಾಧಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಜಾಬಂಧಿಗಳಿಗೆ ವರ್ಷಕ್ಕೆ ಮೂರು ತಿಂಗಳು ಪೆರೋಲ್ ಮೇಲೆ ರಜೆಗೆ ಹೋಗಲು ಅವಕಾಶವಿದೆ. ವರ್ಷಕ್ಕೆ 90 ದಿನಗಳು ಹೊರಗೆ ಇರಬಹುದು. ಒಂದೇ ಬಾರಿ ಮೂರು ತಿಂಗಳು ಸಿಗದಿದ್ದರೂ ಹಂತ ಹಂತವಾಗಿ ಪೆರೋಲ್ ರಜೆ ಪಡೆಯಬಹುದು. ಇದರ ಆಧಾರದ ಮೇಲೆ ಪೆರೋಲ್ಗೆ ಕಾರಾಗೃಹ ಇಲಾಖೆ ಅನುಮತಿ ನೀಡಿತ್ತು.
ಎಸ್ಕೇಪ್ ಆದವರು ನಟೋರಿಯಸ್ಗಳಲ್ಲ:
ಜೈಲಿಂದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿರುವವರು ನಟೋರಿಯಸ್ ರೌಡಿಶೀಟರ್ಗಳಲ್ಲ. ಅನಿರೀಕ್ಷಿತ ಕಾರಣಗಳಿಂದ ಅಪರಾಧ ಎಸಗಿ ಶಿಕ್ಷಾಬಂಧಿಗಳಾಗಿದ್ದವರು. ಹಲವು ವರ್ಷಗಳಿಂದಲೂ ಜೈಲಿನಲ್ಲಿದ್ದ ಕೈದಿಗಳಿಗೆ ಪೆರೋಲ್ ಮೇಲೆ ಹೋಗಬಹುದಾಗಿದೆ. ಇದೇ ಅವಕಾಶ ದುರ್ಬಳಕೆ ಮಾಡಿಕೊಂಡು ಪೆರೋಲ್ ಪಡೆದು ಮತ್ತೆ ಜೈಲಿನ ಕಡೆ ಮುಖ ಮಾಡಿಲ್ಲ. ತಲೆಮರೆಸಿಕೊಂಡವರು ಬೇರೆ ಬೇರೆ ರಾಜ್ಯಗಳಿಗೆ ಹೋಗಿರುವ ಸಾಧ್ಯತೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.
ಓದಿ: ಅಕ್ರಮ ವಿದೇಶ ಪ್ರಜೆಗಳ ಪತ್ತೆ : ಗಡಿಪಾರಿಗೆ ಸಮಿತಿ ರಚಿಸಿದ ಗೃಹ ಇಲಾಖೆ