ಬೆಂಗಳೂರು:ಖಾಲಿ ಹುದ್ದೆ ಭರ್ತಿ, ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈ ಬಾರಿಯ ಆಯವ್ಯಯದಲ್ಲಿ ಈಡೇರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ಓದಿ: ಕ್ವಾರಿ ನಡೆಸುತ್ತಿರೋದು ಮಂತ್ರಿಗಳ ಸಂಬಂಧಿ ಎಂಬ ಮಾಹಿತಿ ಇದೆ : ದಿನೇಶ್ ಗುಂಡೂರಾವ್
ರೇಸ್ ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಸಿಎಂ ನಡೆಸಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ಸರ್ಕಾರಿ ನೌಕರರ ಸಂಘದ ನಿಯೋಗ, ಬೇಡಿಕೆಗಳ ಕುರಿತು ಮನವಿ ಸಲ್ಲಿಕೆ ಮಾಡಿತು.
ಬೇಡಿಕೆಗಳು:
1. ಮೈಸೂರು ಆಡಳಿತ ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ವಿಭಾಗಗಳಲ್ಲಿ ವಸತಿ ಸಹಿತ ಸರ್ಕಾರಿ ನೌಕರರ ತರಬೇತಿ ಕೇಂದ್ರಗಳ ಸ್ಥಾಪನೆ.
2. ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವಸತಿ ಗೃಹ ನಿರ್ಮಾಣ/ ನಿರ್ವಹಣೆಗೆ ಅನುದಾನ ಮಂಜೂರು ಮಾಡಬೇಕು.
3. ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ಭವನ ನಿರ್ವಹಣೆಗೆ ಅನುದಾನ ಮಂಜೂರು ಮಾಡಬೇಕು.
4. ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಹಾಗೂ ಇನ್ನಿತರ ಸಂಘದ ನಿರ್ವಹಣ ಉದ್ದೇಶಕ್ಕೆ ಅನುದಾನ ಮಂಜೂರು ಮಾಡಬೇಕು.
5. ರಾಜ್ಯದ ಸರ್ಕಾರಿ ನೌಕರರಿಗೆ-ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಯೋಜನೆ ಬಗ್ಗೆ ಹಾಲಿ ಇರುವ 'ಜ್ಯೋತಿ ಸಂಜೀವಿನಿ' ಯೋಜನೆ ಹಾಗೂ ವೈದ್ಯಕೀಯ ಹಾಜರಾತಿ ನಿಯಮಗಳನ್ನು ಬದಲಾಯಿಸಬೇಕು. ರಾಜ್ಯದ ಸರ್ಕಾರಿ ನೌಕರರಿಗೆ ಹಾಗೂ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು 1-4-2021ರಿಂದ ಜಾರಿಗೊಳಿಸಲು ಹಾಗೂ ಈ ಯೋಜನೆ ಅನುಷ್ಠಾನಕ್ಕೆ ಅಗತ್ಯವಾಗಿರುವ ಅನುದಾನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಬೇಕು.
6. ರಾಜ್ಯ ಸರ್ಕಾರಿ ನೌಕರರ ಎಲ್ಲಾ ಸೇವೆಗಳನ್ನು ಆನ್ಲೈನ್ ಮೂಲಕ ಜಾರಿಗೊಳಿಸಬೇಕು.
7. ಸರ್ಕಾರಿ ನೌಕರರಿಗೆ ಸುಗಮ ಸೇವೆಗಾಗಿ ಕೆಜಿಐಡಿ ಕಚೇರಿ ಶೀಘ್ರವಾಗಿ ಗಣಕೀಕರಣ ಆಗಬೇಕು.
8. ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು.
9. ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಹಲವಾರು ವೃಂದದ ನೌಕರರ ವೇತನ ತಾರತಮ್ಯವನ್ನು ಸರಿಪಡಿಸಬೇಕು.
10. ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ರಾಜ್ಯದ ನೌಕರರಿಗೂ ವೇತನ ಪರಿಷ್ಕರಣೆ ಮಾಡಬೇಕು.
11. ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.
ಒಟ್ಟು 11 ಬೇಡಿಕೆಗಳನ್ನು ಸಿಎಂ ಮುಂದಿಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೇಡಿಕೆ ಈಡೇರುವ ಭರವಸೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ.