ಬೆಂಗಳೂರು:ಕೆಲವು ಗಂಟೆಗಳ ಕಾಲ 108 ಆ್ಯಂಬುಲೆನ್ಸ್ ಸೇವೆಗೆ ಅಡಚಣೆ ಉಂಟಾಗಿತ್ತು. ನಿನ್ನೆ ಮಧ್ಯಾಹ್ನ 3 ಗಂಟೆಯಿಂದಲೇ ಸೇವೆ ಪುನಾರಂಭವಾಗಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಲು ಸುಮಾರು 8 ಲಕ್ಷ ರೂ. ವೆಚ್ಚದ ಮದರ್ ಬೋರ್ಡ್ ಖರೀದಿಗೆ ಆದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮ್ಯಾನ್ಯುವಲ್ ಕಾಲ್‌ಸೆಂಟರ್‌ಗೂ ಬ್ಯಾಕ್‌ಅಪ್ ಇರಿಸಲಾಗಿದೆ ಎಂದು ತಿಳಿಸಿದರು. ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾದಾಗ ಕೆಲವೇ ಗಂಟೆಗಳಲ್ಲಿ ಸಮಸ್ಯೆ ಸರಿಪಡಿಸಲಾಗಿದೆ. ಇಂತಹ ತ್ವರಿತ ಕಾರ್ಯವನ್ನು ʼತಳ್ಳುವ ಸರ್ಕಾರʼ ಮಾಡುತ್ತದೆಯೇ ಅಥವಾ ʼಸರ್ವಶಕ್ತ ಕ್ರಿಯಾಶೀಲ ಸರ್ಕಾರʼ ಮಾಡುತ್ತದೆಯೇ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರೇ ವಿಚಾರ ಮಾಡಬೇಕು ಎಂದರು.
(ಓದಿ: ತುಮಕೂರು: ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದೆ ವೃದ್ಧೆ ಸಾವು)
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಂಜೆ ಹಾಗೂ ಬೆಳಗ್ಗೆ ನಾನು ಅವರ ಆರೋಗ್ಯದ ಕುರಿತು ಅಪ್‌ಡೇಟ್ ಪಡೆಯುತ್ತಿದ್ದೇನೆ. ಅವರು ಬೇಗ ಗುಣಮುಖರಾಗಿ ರಾಜ್ಯದ ಸೇವೆಗೆ ಮರಳಲಿದ್ದಾರೆ ಎಂದು ಹೇಳಿದರು.
ರಾಜ್ಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ 108 ತುರ್ತು ಸಹಾಯವಾಣಿ ಕರೆಯಲ್ಲಿ ವ್ಯತ್ಯಯವಾಗಿತ್ತು. ಇದರಿಂದ ರೋಗಿಗಳಿಗೆ ಸಕಾಲದಲ್ಲಿ ಆ್ಯಂಬುಲೆನ್ಸ್ ಲಭ್ಯವಾಗುತ್ತಿರಲಿಲ್ಲ. ಸಹಾಯವಾಣಿಗೆ ಕರೆ ಮಾಡಿದರೂ ಕನೆಕ್ಟ್ ಆಗುತ್ತಿರಲಿಲ್ಲ. ಸುಮಾರು ಹತ್ತಾರು ಬಾರಿ ಕರೆ ಮಾಡಿದರೆ ಕರೆ ಕನೆಕ್ಟ್ ಆಗುತ್ತಿತ್ತು. ಇದರಿಂದ ರೋಗಿಗಳು ಪರದಾಡುವಂತಾಗಿತ್ತು. ರಾಜ್ಯದ ವಿವಿಧೆಡೆ ಸಮಸ್ಯೆ ಎದುರಾಗಿದ್ದು, ರೋಗಿಗಳು ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ಸಂಕಷ್ಟಕ್ಕೊಳಗಾಗಿದ್ದರು.
(ಓದಿ: ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸಹಾಯವಾಣಿಯಲ್ಲಿ ತಾಂತ್ರಿಕ ದೋಷ.. ರೋಗಿಗಳ ಪರದಾಟ!)