ಬೆಂಗಳೂರು: 105 ಜನನೂ ಮುಖ್ಯ, 17 ಮಂದಿಯೂ ಮುಖ್ಯ. ಎಲ್ಲರೂ ಸೇರಿದ್ದರಿಂದ ಬಿಜೆಪಿ ಸರ್ಕಾರ ರಚನೆಯಾಗಿದ್ದು ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ರೇಣುಕಾಚಾರ್ಯಗೆ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಟಾಂಗ್ ವಿಧಾನಸೌಧದಲ್ಲಿ ಇಂದು ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಗಾದರೆ 105 ಜನ ಇದ್ದಾಗ ಸರ್ಕಾರ ಏಕೆ ರಚನೆ ಆಗಿಲ್ಲಾ?. 105 ಜನನೂ ಮುಖ್ಯ, 17 ಜನರು ಮುಖ್ಯನೇ ಇಬ್ಬರೂ ಕೈ ಜೋಡಿಸಿದ್ದರಿಂದಲೇ ಸರ್ಕಾರ ಆಗಿದ್ದು ಎಂದು ರೇಣುಕಾಚಾರ್ಯ ಅವರ ಹೇಳಿಕೆಗೆ ಎಂಟಿಬಿ ನಾಗರಾಜ್ ತಿರುಗೇಟು ನೀಡಿದರು.
ಸಚಿವ ಸಂಪುಟ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂಟಿಬಿ, ಅದನ್ನು ನೀವು ಸಿಎಂಗೆ ಕೇಳಬೇಕು. ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೀರಾ ಏಕೆ ವಿಳಂಬ ಎಂದು ನೀವು ಸಿಎಂ ಬಳಿ ಕೇಳಿ ಎಂದರು. ಸಂಪುಟ ವಿಸ್ತರಣೆ ತಡವಾಗುತ್ತಿದೆ. ಸಿಎಂ ಯಡಿಯೂರಪ್ಪನವರು ಹೈಕಮಾಂಡ್ಗೆ ಪಟ್ಟಿ ಕೊಟ್ಟಿದ್ದಾರೆ. ಪಟ್ಟಿ ಅಂಕಿತ ಪಡೆಯಬೇಕು. ಅದು ಬಂದ ಮೇಲೆ ವಿಸ್ತರಣೆ ಮಾಡುತ್ತಾರೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.
17 ಜನರಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ, ಪಕ್ಷದ ಕಾರ್ಯಕರ್ತರ ಶ್ರಮದಿಂದ ಬಂದಿದೆ: ರೇಣುಕಾಚಾರ್ಯ
ಪದೇ ಪದೇ ಅವರ (ಸಿಎಂ) ಮೇಲೆ ಒತ್ತಡ ಹಾಕಬಾರದು. ಸಿಎಂ ಭೇಟಿಯಾದಾಗ ಸಚಿವ ಸ್ಥಾನದ ಬಗ್ಗೆ ಕೇಳುತ್ತೇವೆ. ಕೊಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು. ವಲಸೆ, ಮೂಲ ಎಂಬ ಪ್ರಶ್ನೆ ಇಲ್ಲ. ನಾವೆಲ್ಲಾ ಒಂದೇ ಮನೆಯಲ್ಲಿರೋದು. ಆ ಪ್ರಶ್ನೆ ಉದ್ಭವವಾಗಲ್ಲ ಎಂದು ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.