ಬೆಂಗಳೂರು:ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಪರಿಹಾರವಾಗಿ 10 ಸಾವಿರ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಘೋಷಿಸುವ ಅಗತ್ಯ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಕೊಡಗಿಗೆ ಮತ್ತು ಪ್ರಕೃತಿ ವಿಕೋಪದ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಕೊಡಗಿನಿಂದಲೇ ನಾನು ಪ್ರದೇಶಗಳ ಭೇಟಿ ಆರಂಭಿಸಿದ್ದೇನೆ. ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಹಿಂದೆಯೂ ಪ್ರವಾಹದಿಂದ ಹಾನಿಯಾಗಿತ್ತು. ಸರ್ಕಾರ ಕೊಟ್ಟಿರುವ ಭರವಸೆಗಳನ್ನು ಈಡೇರಿಸಿಲ್ಲ. ಅಲ್ಲಿ ಮನೆಗಳನ್ನ ಕಟ್ಟುವ ಕೆಲಸವೂ ನೆನೆಗುದಿಗೆ ಬಿದ್ದಿದೆ. 5 ಸಾವಿರ ಬಾಡಿಗೆ ಮೂರು ತಿಂಗಳು ನೀಡಿದ್ದಾರೆ. ನಂತರ ಆ ಬಾಡಿಗೆ ಹಣವನ್ನು ನೀಡ್ತಿಲ್ಲ. ಅಲ್ಲಿಗೆ ಭೇಟಿ ನೀಡಿದಾಗ ಇದು ಗಮನಕ್ಕೆ ಬಂದಿದೆ ಎಂದರು.
ಎಲ್ಲೆಲ್ಲಿ ಭೂ ಕುಸಿತ, ಮನೆ ಹಾನಿಯಾಗುತ್ತದೆ ಅಂಥ ಕಡೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. 10 ಸಾವಿರ ಕೋಟಿ ರೂ. ಪ್ಯಾಕೇಜ್ಗೆ ಒತ್ತಾಯಿಸಿದ್ದೇನೆ. ಸರ್ಕಾರ ಸರ್ವಪಕ್ಷ ನಿಯೋಗವನ್ನು ಕೇಂದ್ರದ ಬಳಿಗೆ ಕರೆದೊಯ್ಯಬೇಕು. ಈ ವಿಚಾರದಲ್ಲಿ ಸರ್ಕಾರಕ್ಕೆ ನಾವು ಬೆಂಬಲ ಕೊಡ್ತೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಹಿಂದೆಯೂ ಅಪಾರ ಹಾನಿ ಉಂಟಾಗಿತ್ತು. ಈಗಲೂ ಆಗಿರುವ ಹಿನ್ನೆಲೆ ಈ ಭಾಗದಲ್ಲಿ ಪರಿಹಾರ ಕಾರ್ಯ ಕಲ್ಪಿಸಲು 10 ಸಾವಿರ ಕೋಟಿ ರೂ. ಅನಿವಾರ್ಯವಾಗಿದೆ ಎಂದರು.
ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ಆರು ತಂಡ ರಚನೆ:
ಕೆಪಿಸಿಸಿಯಿಂದ 6 ತಂಡಗಳ ರಚನೆ ಮಾಡಿದ್ದೇವೆ. ತಂಡಗಳನ್ನು ಪ್ರವಾಹ ಪೀಡಿತ ಸ್ಥಳಕ್ಕೆ ಕಳಿಸುತ್ತೇವೆ. ಅಲ್ಲಿ ಪರಿಹಾರದ ಬಗ್ಗೆ ತಂಡಗಳು ಮಾಹಿತಿ ಕಲೆ ಹಾಕಲಿವೆ. ನಂತರ ಅದರ ಬಗ್ಗೆ ನಾವು ಸರ್ಕಾರದ ಗಮನಕ್ಕೆ ತರುತ್ತೇವೆ. ಕಳೆದ ಬಾರಿ 35 ಸಾವಿರ ಕೋಟಿ ಪರಿಹಾರ ಕೇಳಲಾಗಿತ್ತು. ಆದರೆ ಕೇಂದ್ರ ಕೊಟ್ಟಿದ್ದು 1860 ಕೋಟಿ ಮಾತ್ರ. ಸರ್ಕಾರ ಕೇವಲ ಆಶ್ವಾಸನೆ ಕೊಟ್ಟರೆ ಸಾಲದು. ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಬೇಕು ಎಂದರು.
ಪ್ರವಾಹದ ನೆರವಿನ ಬಗ್ಗೆ ದಾಖಲೆ ಸಮೇತ ಮಾತನಾಡೋಣ ಎಂಬ ಅಶೋಕ್ ಹೇಳಿಕೆ ವಿಚಾರ ಮಾತನಾಡಿ, ಪಾಪ ಅಶೋಕ್ ಅಣ್ಣನಿಗೆ ನನ್ನ ಹೆಸರು ಹೇಳದಿದ್ರೆ ಸಮಾಧಾನವಿಲ್ಲ. ಹಿಂದೆ ಕೇಂದ್ರ, ರಾಜ್ಯದಲ್ಲಿ ಬೇರೆ ಬೇರೆ ಪಕ್ಷ ಇದ್ವು. ಈಗ ಎರಡೂ ಕಡೆ ಬಿಜೆಪಿಯೇ ಇದೆ. ಯಾಕೆ ಏನೂ ಮಾಡ್ತಿಲ್ಲ. ಸದನದಲ್ಲಿ ಇದರ ಬಗ್ಗೆ ನಾವು ಚರ್ಚೆ ಮಾಡೋಣ. ದಾಖಲೆ ಸಮೇತ ಇಟ್ಕೊಂಡೇ ಮಾತನಾಡೋಣ. ಈಗ ರಾಜಕೀಯ ಮಾಡೋಕೆ ನಮಗೆ ಇಷ್ಟವಿಲ್ಲ ಎಂದರು.
ಕಳೆದ ಬಾರಿ 35 ಸಾವಿರ ಕೋಟಿ ಕೇಳಿದ್ದರು. ಆದ್ರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ 1800 ಕೋಟಿ. ಇವತ್ತು ನಾಲ್ಕು ಸಾವಿರ ಕೋಟಿ ಕೇಳಿದ್ದಾರೆ. ಕೇಂದ್ರ ಸರ್ಕಾರ ಎಷ್ಟು ನೀಡುತ್ತೆ ನೋಡೋಣ. ಬಿಜೆಪಿ ಸಂಸದರು ಈಗಲಾದರೂ ಪ್ರಧಾನಿಗಳ ಮೇಲೆ ಒತ್ತಡ ತರಲಿ ಎಂದು ಆಗ್ರಹಿಸಿದರು.ಅವತ್ತು ಉಳುವವನೆ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ ಈಗ ಇದರ ವಿರುದ್ಧವಾದ ಕಾಯ್ದೆಯನ್ನು ಸರ್ಕಾರ ತಂದಿದೆ. ಇದರ ಬಗ್ಗೆ ನಾವು ಹೋರಾಟ ಮಾಡ್ತೇವೆ. ಎಪಿಎಂಸಿ ಕಾಯ್ದೆಯಿಂದಲೂ ರೈತರಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆಯೂ ನಾವು ಧ್ವನಿ ಎತ್ತುತ್ತೇವೆ. ಕೋವಿಡ್ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಇದೇ 20ರಂದು ಜನಧ್ವನಿ ಎಂಬ ಕಾರ್ಯಕ್ರಮ ಮಾಡ್ತೇವೆ. ಎಲ್ಲಾ ಜಿಲ್ಲಾ,ತಾಲೂಕು ಕೇಂದ್ರಗಳಲ್ಲಿ ಧರಣಿ ನಡೆಸುತ್ತೇವೆ. ಡಿಸಿ, ತಹಶೀಲ್ದಾರ್ಗಳಿಗೆ ಮನವಿ ನೀಡಲಿದ್ದೇವೆ. ಈ ಬಗ್ಗೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ ಎಂದರು.