ಕರ್ನಾಟಕ

karnataka

ETV Bharat / state

100 ಕೋಟಿ ರೂ. ಹಗರಣ: ಬಿಡಿಎ ಜಾಗಕ್ಕೆ ಅಕ್ರಮವಾಗಿ ಬದಲಿ ಜಾಗ ಪಡೆದು ಮಾರಾಟ! - ಬಿಡಿಎಯಲ್ಲಿ 100 ಕೋಟಿ ರೂಪಾಯಿ ಹಗರಣ

ಈ ಹಿಂದೆ ಮಂಜೂರು ಮಾಡಲಾದ ಕೆಲವು ಜಾಗಗಳು ಬಫರ್ ಝೋನ್ ಸೇರಿದಂತೆ ಇನ್ನಿತರ ಕಾರಣಗಳಿಂದ ಮನೆ ನಿರ್ಮಾಣಕ್ಕೆ ಅಸಾಧ್ಯ ಎಂಬ ನೆಪ ಹೇಳಿ ಥಣಿಸಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಬದಲಿ ಜಾಗ ಪಡೆದು ಅಕ್ರಮ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.

100-crores-scam-in-bangalore-development-authority
100 ಕೋಟಿ ರೂ. ಹಗರಣ: ಬಿಡಿಎ ಜಾಗಕ್ಕೆ ಅಕ್ರಮವಾಗಿ ಬದಲಿ ಜಾಗ ಪಡೆದು ಮಾರಾಟ!

By

Published : Jul 2, 2022, 10:20 PM IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನದಲ್ಲಿದ್ದ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡಿರುವ ಹಗರಣವೊಂದು ಬೆಳಕಿಗೆ ಬಂದಿದೆ. ಆ ಮೂಲಕ ಪ್ರಾಧಿಕಾರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಸಂಬಂಧ ನಾಗರಾಜ್ ಎಂಬ ವ್ಯಕ್ತಿ ಮತ್ತು ಇದಕ್ಕೆ ಕಾರಣರಾದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಬಿಎಂಟಿಎಫ್ (ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್)​ನಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.

ಈಸ್ಟ್ ಆಫ್ ಎನ್​ಜಿಇಎಫ್ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಈರಣ್ಣ ಎಂಬವರಿಗೆ ಸೇರಿದ ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ ಹೋಬಳಿಯ ಬಾಣಸವಾಡಿ ಗ್ರಾಮದ ಸರ್ವೆ ಸಂಖ್ಯೆ 73ರಲ್ಲಿದ್ದ 4 ಎಕರೆ 13 ಗುಂಟೆ ಜಮೀನನ್ನು 1986ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಬಿಡಿಎ ಇದಕ್ಕೆ ಪರಿಹಾರದ ಹಣವನ್ನು ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿತ್ತು.

ಆದರೆ, ಈರಣ್ಣ ಬಳಿ ನಾಗರಾಜ್ ಎಂಬ ವ್ಯಕ್ತಿ ಜಿಪಿಎ ಬರೆಯಿಸಿಕೊಂಡು ಜಮೀನು ತಮ್ಮದು ಎಂದು ಪ್ರತಿಪಾದಿಸಿ, ನಿವೇಶನಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದರು. ಈ ಮಧ್ಯೆ ರೆವಿನ್ಯೂ ನಿವೇಶನದಾರರ ಮೂಲಕ ಬಿಡಿಎ ತಮ್ಮ ನಿವೇಶನಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಇದಕ್ಕೆ ಬದಲಿ ನಿವೇಶನಗಳನ್ನು ನೀಡಲು ಸೂಚಿಸಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬಿಡಿಎ ನಿಯಮಾನುಸಾರ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿ ಅರ್ಜಿ ವಿಲೇವಾರಿ ಮಾಡಿತ್ತು.

ಇದರ ನಡುವೆ ನಾಗರಾಜ್ ಎಲ್ಲ ರೆವಿನ್ಯೂ ನಿವೇಶನದಾರರಿಂದ ನಿವೇಶನಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡು, ತನಗೆ ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಬಿಡಿಎಗೆ ಅರ್ಜಿ ಸಲ್ಲಿಸುತ್ತಾರೆ. ಈ ಬಗ್ಗೆ ಎರಡು ಬಾರಿ ಚರ್ಚಿಸಿದ್ದ ಬಿಡಿಎ ಪ್ರಾಧಿಕಾರ ಸಭೆಯು ನಿಯಮಾವಳಿಗಳ ಪ್ರಕಾರ ಬದಲಿ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ನಾಗರಾಜ್ ಮನವಿಯನ್ನು ತಿರಸ್ಕರಿಸಿತ್ತು.

2012ರಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ನಾಗರಾಜ್​ಗೆ ಅರ್ಕಾವತಿ ಬಡಾವಣೆಯ ವಿವಿಧ ಸರ್ವೇ ನಂಬರ್​ಗಳಲ್ಲಿ ಒಟ್ಟು 4 ಎಕರೆ 13 ಗುಂಟೆ ಜಮೀನನ್ನು ಬದಲಿಯಾಗಿ ನೀಡಲು ನಿರ್ಧಾರವಾಗಿ ಅದರಂತೆ ಮಂಜೂರು ಮಾಡಲಾಗುತ್ತದೆ. ಹೀಗೆ ಮಂಜೂರು ಮಾಡಲಾದ ಕೆಲವು ಜಾಗಗಳು ಬಫರ್ ಝೋನ್ ಸೇರಿದಂತೆ ಇನ್ನಿತರ ಕಾರಣಗಳಿಂದ ಮನೆ ನಿರ್ಮಾಣಕ್ಕೆ ಅಸಾಧ್ಯ ಎಂಬ ನೆಪ ಹೇಳಿ ನಾಗರಾಜ್ ತಮಗೆ ಬೇರೆ ಕಡೆ ಭೂಮಿ ನೀಡಬೇಕೆಂದು ಮತ್ತೊಮ್ಮೆ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡುತ್ತಾರೆ. ಈ ಮನವಿಯನ್ನು ಪುರಸ್ಕರಿಸಿದ್ದ ಬಿಡಿಎ ಅಧಿಕಾರಿಗಳು 2014ರಲ್ಲಿ ಥಣಿಸಂದ್ರ ಸೇರಿದಂತೆ ವಿವಿಧ ಕಡೆಗಳ ಪ್ರೈಂ ಸ್ಥಳಗಳಲ್ಲಿ ಜಿಪಿಎ ದಾರನಾಗಿದ್ದ ನಾಗರಾಜ್ ಹೆಸರಿಗೆ ಮಂಜೂರು ಮಾಡಿ, ನೋಂದಣಿಯನ್ನೂ ಮಾಡಿಸಿ ಸ್ವಾಧೀನಪತ್ರಗಳನ್ನೂ ನೀಡಿರುತ್ತಾರೆ.

ತನಿಖೆಗೆ ಬಿಡಿಎ ಅಧ್ಯಕ್ಷ ಆದೇಶ:ಅಕ್ರಮವನ್ನು ಗಮನಿಸಿದ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಬಿಡಿಎ ಕಾರ್ಯಪಡೆಯ ಡಿವೈಎಸ್​ಪಿ ರವಿಕುಮಾರ್ ತಂಡಕ್ಕೆ ಆದೇಶ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ರವಿಕುಮಾರ್ ಹಾಗೂ ಇನ್ಸ್​ ಪೆಕ್ಟರ್​​ ಶ್ರೀನಿವಾಸ್ ಈ ಪ್ರಕರಣದಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಆಯುಕ್ತರು ಮತ್ತು ಅಧ್ಯಕ್ಷರಿಗೆ ವರದಿ ನೀಡಿದ್ದರು.

ಅಂತೆಯೇ ಬಿಡಿಎ ಅಧ್ಯಕ್ಷ ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಸೂಚನೆಯಂತೆ ಇನ್ಸ್​ಪೆಕ್ಟರ್ ಶ್ರೀನಿವಾಸ್ ಈ ದೂರು ನೀಡಿದ್ದಾರೆ. ಈ ಭೂಮಂಜೂರಾತಿ ನಡೆಸಿ ಸುಮಾರು 100 ಕೋಟಿ ರೂಪಾಯಿಯಷ್ಟು ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ಈ ಬಗ್ಗೆ ನಾಗರಾಜ್ ಮತ್ತು ಇದಕ್ಕೆ ಕಾರಣರಾಗಿರುವ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಬಿಎಂಟಿಎಫ್​ಗೆ ದೂರು ನೀಡಿದ್ದರು. ಈ ದೂರಿನನ್ವಯ ಬಿಎಂಟಿಸಿ ಇನ್ಸ್​ಪೆಕ್ಟರ್ ಬೇಬಿ ವಾಲಿಕರ್ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ನಗರ ಪೊಲೀಸ್ ಇಲಾಖೆ: ಒಂದೇ ದಿನ ದಾಖಲೆಯ ಮೂರು ಸಾವಿರ ಪೊಲೀಸರ ವರ್ಗಾವಣೆ...!

ABOUT THE AUTHOR

...view details