ಬೆಂಗಳೂರು: ಪ್ರೀತಿಸುವ ನೆಪದಲ್ಲಿ ಅಪ್ರಾಪ್ತೆಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ನಗರದ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ನಗರದ ಅಬ್ದುಲ್ ಜುನೈದ್ ಶಿಕ್ಷೆಗೊಳಗಾಗಿರುವ ಅಪರಾಧಿ. ಈತ ವೈಯ್ಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯೊಂದಿಗೆ ಪ್ರೀತಿಸುವುದಾಗಿ ಸಂಪರ್ಕ ಇಟ್ಟುಕೊಂಡಿದ್ದ. ವಿಷಯ ತಿಳಿದ ಬಾಲಕಿಯ ಪೋಷಕರು ಆಗಾಗ ಕರೆ ಮಾಡಿ ಮಗಳೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದರು.
ಹಾಗಿದ್ದೂ, 2017ರ ಏಪ್ರಿಲ್ 12ರಂದು ಬಾಲಕಿಯನ್ನು ಬಳ್ಳಾರಿಯ ಹೂವಿನಹಡಗಲಿಗೆ ಕರೆದೊಯ್ದಿದ್ದ ಅಬ್ದುಲ್ ಜುನೈದ್, ಏಪ್ರಿಲ್ 19ರವರೆಗೆ ಸಂಬಂಧಿಕರ ಮನೆಯಲ್ಲಿ ಇರಿಸಿಕೊಂಡಿದ್ದ. ಈ ವೇಳೆ ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ನಡೆಸಿದ್ದ.
ಈ ಸಂಬಂಧ ಬಾಲಕಿಯ ಪೋಷಕರು ನಗರದ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅದರಂತೆ ಪೊಲೀಸರು, ಆರೋಪಿ ಅಬ್ದುಲ್ ಜುನೈದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 366(ಎ) 376 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 4, 5 ಮತ್ತು 6 ಅಡಿ ಪ್ರಕರಣ ದಾಖಲಿಸಿ, ನಗರದ 51ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ಗೆ ದೋಷಾರೋಪಣೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ ಕೆ ಕೋಮಲ ಅವರು, ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಶಿಕ್ಷೆ ವಿಧಿಸಿದ್ದಾರೆ. ಬಾಲಕಿ ಪರ ಸರ್ಕಾರಿ ಅಭಿಯೋಜಕಿ ಕೆ ಎಸ್ ವೀಣಾ ಪ್ರಬಲ ವಾದ ಮಂಡಿಸಿದ್ದರು.