ಬೆಂಗಳೂರು :ಅಂದಾಜು ಹತ್ತು ಸಾವಿರ ವರ್ಷಗಳ ಹಳೆಯದಾದ ಶಿವನ ತ್ರಿಶೂಲ ಮತ್ತು 3 ಸಾವಿರ ವರ್ಷಗಳಷ್ಟು ಪುರಾತನವಾದ ಇಂಧ್ರನ ವಜ್ರಾಯುಧ ಸಿಕ್ಕಿದೆ. 2015ರಲ್ಲಿ ಗಣಿ ಉದ್ಯಮಿ ಹಾಗು ಸಂಶೋಧಕ ಸಯ್ಯದ್ ಸಮೀರ್ ಹುಸೇನ್ ಅವರು ಫಿಲಿಪ್ಪೀನ್ಸ್ ದೇಶದಲ್ಲಿ ಗಣಿಗಾರಿಕೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಭೂ ಗರ್ಭದಲ್ಲಿ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಮೌಲ್ಯವುಳ್ಳ ಅತ್ಯಂತ ಅಪರೂಪದ, ಅಮೂಲ್ಯ ಮತ್ತು ಭಾರತೀಯ ಪರಂಪರೆಯ ಈ ವಸ್ತುಗಳು ದೊರೆತಿದ್ದವು. ಇವು ದೈವಿಕ ಸ್ವರೂಪದ ಮೌಲ್ಯಗಳನ್ನು ಒಳಗೊಂಡಿವೆ.
ಇದೇ ಮೊದಲ ಬಾರಿಗೆ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೂರುವರೆ ಅಡಿ ಎತ್ತರದ ತ್ರಿಶೂಲ ಮತ್ತು ಒಂದೂವರೆ ಅಡಿ ಉದ್ದದ ವಜ್ರಾಯುಧಗಳನ್ನು ಸಾರ್ವಜನಿಕರಿಗೆ ಸಯ್ಯದ್ ಸಮೀರ್ ಹುಸೇನ್ ಪ್ರದರ್ಶಿಸಿದರು. ವಜ್ರಾಯುಧ ಜಗತ್ತಿನ ಅತ್ಯಂತ ಶಕ್ತಿಶಾಲಿ ಅಸ್ತ್ರ. ಇದನ್ನು ಇಂಧ್ರ ಬಳಸುತ್ತಿದ್ದ. ತ್ರಿಶೂಲ ಶಿವನಿಗೆ ಪ್ರಿಯವಾದ ವಸ್ತು. ಇವುಗಳ ಬಗ್ಗೆ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ದೈವಿಕ ವಸ್ತುಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಯುತ್ತಿದ್ದು, ಭಾರತೀಯ ಪರಂಪರೆಗೆ ಅತ್ಯಂತ ಅಮೂಲ್ಯ ವಸ್ತುಗಳು ಎಂದು ಭಾರತೀಯ ಪುರಾತತ್ವ ಇಲಾಖೆ, ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗು ದೆಹಲಿಯ ಭಾರತೀಯ ವಸ್ತುಸಂಗ್ರಹಾಲಯ ಮಾನ್ಯತೆ ನೀಡಿದೆ ಎಂದು ಅವರು ತಿಳಿಸಿದರು.
ಅಪರೂಪದಲ್ಲೇ ಅಪರೂಪದ ಈ ವಸ್ತುಗಳನ್ನು ಫಿಲಿಪ್ಪೀನ್ಸ್‌ನಿಂದ ಜೋಪಾನವಾಗಿ ಭಾರತಕ್ಕೆ ತಂದು ಸಂಬಂಧಪಟ್ಟ ಸಚಿವಾಲಯಗಳ ಅನುಮತಿಯೊಂದಿಗೆ ಸಂರಕ್ಷಿಸಲಾಗಿದೆ. ಇದನ್ನು ದೇಶದ ಜನರ ಎದುರಿಗೆ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗುತ್ತಿದೆ. ಪುರಾತತ್ವ ಇಲಾಖೆಯ ಜೊತೆಗೆ ಈಗಾಗಲೇ ಹಲವಾರು ಹಿಂದೂ ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್‌ಗಳ ಮುಖ್ಯಸ್ಥರು ವಸ್ತುಗಳನ್ನು ಪರಿವೀಕ್ಷಿಸಿ ಇವು ಭಾರತೀಯ ಪರಂಪರೆಗೆ ಅತ್ಯಂತ ಅಗತ್ಯ ವಸ್ತುಗಳೆಂದು ಋಜುವಾತುಪಡಿಸಿದ್ದಾರೆ. ಹಲವಾರು ರಾಜಕೀಯ ಮುತ್ಸದ್ದಿಗಳೂ ಸಹ ಈ ವಸ್ತುಗಳು ಮತ್ತು ಮಹತ್ವದ ಬಗ್ಗೆ ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.