ಬೆಂಗಳೂರು :ಜಮೀನು ವ್ಯಾಜ್ಯ ಸರಿಪಡಿಸುವುದಾಗಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ 10 ಲಕ್ಷ ರೂ. ಪಡೆದು ವಂಚಿಸಿದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಜಯನಗರದ ನಿವಾಸಿ ವೆಂಕಟೇಶ್ ಎಂಬಾತ ಬಂಧಿತ. ಜೆಪಿನಗರ ನಿವಾಸಿ ನಾರಾಯಣ್ (88) ಎಂಬುವರು ಕೊಟ್ಟ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:ದೂರುದಾರರಾದ ನಾರಾಯಣ್ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ತಾವರೆಕೆರೆ ಹೋಬಳಿ ನರಸಿಂಹಪುರ ಗ್ರಾಮದಲ್ಲಿ 11 ಎಕರೆ 20 ಗುಂಟೆ ಜಮೀನನ್ನು 2015ರಲ್ಲಿ ಕಂಚನಮಾಲ ಎಂಬುವರಿಂದ ಖರೀದಿಸಿದ್ದರು. ಈ ಆಸ್ತಿಯ ವಿಚಾರವಾಗಿ ನಾರಾಯಣ್ ಹಾಗೂ ಖಾಸಗಿ ಕಂಪನಿಯೊಂದರ ನಡುವೆ ಜಮೀನು ವ್ಯಾಜ್ಯ ಇತ್ತು.
2017 ಆ.1ರಂದು ಅಪರಿಚಿತ ವ್ಯಕ್ತಿಯೊಬ್ಬ ನಾರಾಯಣ್‌ರನ್ನು ಸಂಪರ್ಕಿಸಿ ಜಯನಗರದ ಹೋಟೆಲ್‌ವೊಂದಕ್ಕೆ ಕರೆಯಿಸಿ ತಾನು ಸಿಸಿಬಿ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಎಂದು ಪರಿಚಯಿಸಿಕೊಂಡಿದ್ದ. ನೀವು ಖರೀದಿಸಿರುವ ಜಮೀನಿನ ವಿಚಾರವಾಗಿ ವಿಚಾರಣೆ ಮಾಡುತ್ತಿದ್ದು, ಮೋಸದಿಂದ ಆಸ್ತಿ ಖರೀದಿಸಿದ್ದೀರಿ ಎಂದು ಬೆದರಿಸಿ ಪೊಲೀಸರು ಬಳಸುವ ಕೋಳವನ್ನು ತೋರಿಸಿದ್ದ. 15 ಲಕ್ಷ ರೂ. ಲಂಚ ಕೊಡದಿದ್ದರೆ ಬಂಧಿಸುವುದಾಗಿ ಹೇಳಿದ್ದ. ಇದರಿಂದ ಆತಂಕಗೊಂಡ ನಾರಾಯಣ್ ಸ್ಥಳದಲ್ಲೇ 50 ಸಾವಿರ ರೂ. ಕೊಟ್ಟು 10 ಲಕ್ಷ ರೂ. ಡೀಲ್ ಕುದುರಿಸಿದ್ದರು.
ಆರೋಪಿ ಬಣ್ಣ ಬಯಲು : ಹಂತ-ಹಂತವಾಗಿ ಶ್ರೀನಿವಾಸ್ ಸೂಚಿಸಿದ ಬ್ಯಾಂಕ್ ಖಾತೆಗೆ ನಾರಾಯಣ್ ಆರ್‌ಟಿಜಿಎಸ್ ಮೂಲಕ 10 ಲಕ್ಷ ರೂ. ಕಳುಹಿಸಿದ್ದರು. ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಕೇಸ್ ಕ್ಲೋಸ್ ಮಾಡುವುದಾಗಿ ಆರೋಪಿ ಹೇಳಿದ್ದ. ಇತ್ತೀಚೆಗೆ ನಾರಾಯಣ್ ಸಿಸಿಬಿ ಕಚೇರಿಗೆ ಹೋಗಿ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಬಗ್ಗೆ ವಿಚಾರಿಸಿದಾಗ ನೀವು ಹೇಳಿದ ವ್ಯಕ್ತಿ ಯಾರೂ ಇಲ್ಲ ಎಂದು ಹೇಳಿದ್ದರು.
ಅನುಮಾನಗೊಂಡ ನಾರಾಯಣ್ ತಾವು ಹಣ ಕೊಟ್ಟ ವ್ಯಕ್ತಿಯ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಆತನ ಹೆಸರು ವೆಂಕಟೇಶ್ ಎಂಬುದು ಗೊತ್ತಾಗಿದೆ. ಆ ಬಳಿಕ ತಾವು ಮೋಸ ಹೋಗಿರುವುದನ್ನು ಅರಿತ ನಾರಾಯಣ್ ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿ ವೆಂಕಟೇಶ್ ನಗರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು, ವಂಚನೆ ಮಾಡಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ:ರಾಜ್ಯದಲ್ಲಿ ಕೊರೊನಾ ಹೊಸ ಕೇಸ್ ಮತ್ತಷ್ಟು ಇಳಿಕೆ.. ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..