ಬೆಂಗಳೂರು:ಮಂಗಳಮುಖಿಯರಿಗೆ ಸರ್ಕಾರದ ಎಲ್ಲ ಉದ್ಯೋಗಗಳಲ್ಲಿಯೂ ಶೇಕಡ 1ರಷ್ಟು ಹುದ್ದೆಗಳನ್ನು ಮೀಸಲಿಡುವುದಾಗಿ ಹೈಕೋರ್ಟ್ಗೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರ, ಈಗಾಗಲೇ ಕರಡು ಅಧಿಸೂಚನೆಯನ್ನು ಹೊರಡಿಸಿದ್ದೇವೆ ಎಂದು ತಿಳಿಸಿದೆ.
ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಹೆಚ್‍ಐವಿ ಪೀಡಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ವಕೀಲ ವಿಜಯಕುಮಾರ್ ಪಾಟೀಲ್ ಅವರು ಪೀಠಕ್ಕೆ ಮಾಹಿತಿ ನೀಡಿ, ಸುಪ್ರೀಂ ಕೋರ್ಟ್ ನಿರ್ದೇಶದನಂತೆ ಸರ್ಕಾರದ ಎಲ್ಲ ಹುದ್ದೆಗಳಲ್ಲಿಯೂ ಶೇ.1ರಷ್ಟು ಹುದ್ದೆಗಳನ್ನು ಮಂಗಳಮುಖಿರಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆ ಮಾಡಲಾಗುತ್ತಿದೆ. ಈ ಕುರಿತಂತೆ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರಡು ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ಅಂತಿಮಗೊಳಿಸಲಾಗುವುದು ಎಂದು ವಿವರಿಸಿದರು.